ಬೆಂಗಳೂರು: ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ದರವನ್ನು ಕೂಡಲೇ ಇಳಿಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ, ಭೀಮನಗೌಡ ಸುಂಕೇಶ್ವರಹಾಳ, ಹಿಂದಿನ ಬಿಜೆಪಿ ಸರ್ಕಾರ ಮಾಡಿದ ವಿದ್ಯುತ್ ಬಿಲ್ ಹೆಚ್ಚಳದ ನಿರ್ಧಾರವು ಈಗಾಗಲೇ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹೊರೆಯಾಗಿದ್ದು, ಇದನ್ನು ಈಗಿನ ಕಾಂಗ್ರೆಸ್ ಸರ್ಕಾರವು ವಾಪಸ್ ಪಡೆದು ಹಳೆಯ ದರವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಪಾಲಕರು ಈಗಾಗಲೇ ತಮ್ಮ ಮಕ್ಕಳ ಪ್ರವೇಶ ಶುಲ್ಕ ಮತ್ತು ಪುಸ್ತಕಗಳ ಖರೀದಿ ಇತ್ಯಾದಿ ಆರ್ಥಿಕ ಒತ್ತಡದಿಂದ ಹೆಣಗಾಡುತ್ತಿದ್ದಾರೆ. ಪ್ರಸ್ತುತ ಹೆಚ್ಚಿಸಿದ ವಿದ್ಯುತ್ ಬಿಲ್ ನಿಂದ ಪಾಲಕರು ಮತ್ತು ಪೋಷಕರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಿದೆ. ಈಗಿರುವ ಕಾಂಗ್ರೆಸ್ ಸರ್ಕಾರವು ಒಂದು ಕಡೆ ಉಚಿತ ಎಂದು ಹೇಳಿ ಮತ್ತೊಂದು ಕಡೆ ಈ ಹಿಂದಿನ ಸರ್ಕಾರ ಹೆಚ್ಚಳ ಮಾಡಿದ ವಿದ್ಯುತ್ ದರವನ್ನು ಮುಂದುವರಿಸುತ್ತಿರುವ ದ್ವಂದ್ವ ನೀತಿಯು ಅಕ್ಷಮ್ಯ ಕೂಡಲೇ ಇದನ್ನು ನಿಲ್ಲಿಸಬೇಕು. ಎಂದು ಪತ್ರದ ಮೂಲಕ ಕಿಡಿಕಾರಿದ್ದಾರೆ.
ಇದ್ದನ್ನೂ ಓದಿ:ದರ ಏರಿಕೆಯ ಶಾಕ್ ಮೇಲೆ ಶಾಕ್! ರಾಜ್ಯ ಸರಕಾರದಿಂದ ಕರೆಂಟ್ ಶಾಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಡಳಿತವು ಕೂಡಲೇ ಮಧ್ಯಪ್ರವೇಶಿಸಿ ವಿದ್ಯುತ್ ದರ ಏರಿಕೆಯನ್ನು ಪರಿಶೀಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹಳೆಯ ದರವನ್ನು ಮುಂದುವರಿಸಬೇಕೆಂದು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ವಿದ್ಯುತ್ ದರವನ್ನು ಕಡಿಮೆ ಮಾಡಿ ಸರ್ಕಾರವು ಬಡ ಮತ್ತು ಮಧ್ಯಮವರ್ಗದ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಬೇಕೆಂದು ಎಸ್ಎಫ್ಐ ಆಗ್ರಹಿಸಿದೆ.