ನಿರುದ್ಯೋಗ ಸಮಸ್ಯೆಯು ನಾಡಿನ ಯುವಜನರನ್ನು ಬಾಧಿಸದಿರಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳ ಸಂಭ್ರಮದಲ್ಲಿರುವುದರಿಂದ ನುಡಿದಂತೆ ನಡೆಯುತ್ತಿರುವ 100 ದಿನಗಳ ಗ್ಯಾರೆಂಟಿ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ, ನಿರುದ್ಯೋಗ ಸಮಸ್ಯೆಯು ನಾಡಿನ ಯುವಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಮ್ಮ ಸರ್ಕಾರವು ನಿರುದ್ಯೋಗಿ ಯುವಜನರಿಗೆ ಆರ್ಥಿಕ ನೆರವು ನೀಡುವ “ಯುವನಿಧಿ” ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಆಗಸ್ಟ್‌ 30ಕ್ಕೆ ಅನುಷ್ಠಾನ: ಸಿಎಂ ಸಿದ್ದರಾಮಯ್ಯ

ಈ ಬಗ್ಗೆ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ (ಟ್ವೀಟ್‌) ಆಗಸ್ಟ್‌-28 ರಂದು ಬರೆದುಕೊಂಡಿರುವ ಅವರು, 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳ ವರೆಗೆ ಉದ್ಯೋಗ ಸಿಗದ ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು ರೂ. 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆಯನ್ನು ನೀಡುವ ಮೂಲಕ ನಿರುದ್ಯೋಗದ ಹತಾಶ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಹೊರತಂದು, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಹುಡುಕಿಕೊಳ್ಳಲು ಇನ್ನಷ್ಟು ಸಮಯಾವಕಾಶ ಕಲ್ಪಿಸಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನಿರುದ್ಯೋಗ ಭತ್ಯೆ ನೀಡುವುದಷ್ಟೇ ಅಲ್ಲ ಇದರ ಜೊತೆಗೆ ಲಭ್ಯವಿರುವ ಎಲ್ಲಾ ಅವಕಾಶಗಳು ಹಾಗೂ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗ ಸೃಷ್ಟಿಸಲು ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಮ್ಮ ಮೊದಲ ‘100 ದಿನಗಳ’ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *