2026ನೇ ವರ್ಷ ಹತ್ತಿರ ಬರುತ್ತಿರುವಂತೆ, ಸಂಸತ್ತು ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ವಿಚಾರ ಸಾರ್ವಜನಿಕರ ಗಮನವನ್ನು ಸೆಳೆಯುತ್ತಿದೆ ಹಾಗೂ ವಿವಾದವೂ ಸೃಷ್ಟಿಯಾಗುತ್ತಿದೆ. ಕ್ಷೇತ್ರಗಳ ಸಂಖ್ಯೆಯ ಸ್ಥಾಗಿತ್ಯ (ಫ್ರೀಜ್) ಕೊನೆಗೊಳ್ಳುವ ವರ್ಷ ಇದಾಗಿದೆ. ಹಾಗೂ 2026ರ ನಂತರ ಪ್ರಥಮ ಜನಗಣತಿಯ ಬೆನ್ನಲ್ಲಿ ಮರುವಿಂಗಡಣೆಯ ಮುಂದಿನ ಸುತ್ತನ್ನು ನಡೆಸಬೇಕಾದ ವರ್ಷವಿದು. 1976ರಲ್ಲಿ ತುರ್ತುಪರಿಸ್ಥಿತಿ ವೇಳೆ ತರಲಾದ ಸಂವಿಧಾನದ 42ನೇ ತಿದ್ದುಪಡಿ ಮೂಲಕ ಮರುವಿಂಗಡಣೆಯನ್ನು ಆರಂಭದಲ್ಲಿ ಫ್ರೀಜ್ ಮಾಡಲಾಗಿತ್ತು. ಅದರ ನಂತರ, ವಾಜಪೇಯಿ ಸರಕಾರದಡಿ ಸ್ಥಗಿತತೆಯನ್ನು 2026ರ ವರೆಗೆ ವಿಸ್ತರಿಸಲಾಗಿತ್ತು.
–ಪ್ರಕಾಶ್ ಕಾರಟ್
–ಅನು: ವಿಶ್ವ
ಕ್ಷೇತ್ರ ಮರುವಿಂಗಡಣೆ ಕುರಿತು ಸಂವಿಧಾನದಲ್ಲಿ ಎರಡು ಅಂಶಗಳು ಅಡಕವಾಗಿವೆ:
(1) ಪ್ರತಿ ರಾಜ್ಯದ ಜನಸಂಖ್ಯೆಯ ಅನುಗುಣವಾಗಿ, ಪ್ರತಿ ದಶಕಕ್ಕೊಮ್ಮೆ ನಡೆಯುವ ಜನಗಣತಿ ನಂತರ ರಾಷ್ಟ್ರೀಯ ಒಟ್ಟು ಸಂಖ್ಯೆಯ ಅನುಪಾತದಲ್ಲಿ ಇರುವಂತೆ ಲೋಕಸಭೆ ಕ್ಷೇತ್ರಗಳ ಸಂಖ್ಯೆಯನ್ನು ಪರಿಷ್ಕರಿಸುವುದು. ಅಲ್ಲದೆ, ಅನುಗುಣವಾಗಿ ಪ್ರತಿ ರಾಜ್ಯದ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು ಹೊಂದಾಣಿಕೆ ಮಾಡುವುದು.
(2) ಸಂಸತ್ ಮತ್ತು ವಿಧಾನಸಭೆ ಕ್ಷೇತ್ರಗಳ ಪ್ರಾದೇಶಿಕ ಗಡಿಗಳನ್ನು ಮರುರೂಪಿಸುವುದು. ಅವುಗಳು ಜನಸಂಖ್ಯೆಗೆ ಸಮನಾಗಿ ಹಾಗೂ ತುಲನಾತ್ಮಕವಾಗಿರುವಂತೆ ಖಾತರಿಪಡಿಸುವುದು ಅದರ ಉದ್ದೇಶವಾಗಿದೆ.
ದಕ್ಷಿಣ ರಾಜ್ಯಗಳ ಆಕ್ಷೇಪಣೆಯೆಂದರೆ
1976ರ ಸಾಂವಿಧಾನಿಕ ತಿದ್ದುಪಡಿ ಮತ್ತು ಅದರ ನಂತರ 2001ರಲ್ಲಿ ವಾಜಪೇಯಿ ಸರಕಾರದ ಅವಧಿಯಲ್ಲಿ ಮಾಡಲಾದ ತಿದ್ದುಪಡಿಯ ಕಾರಣದಿಂದ 1981, 1991 ಮತ್ತು 2001ರ ದಶವಾರ್ಷಿಕ ಜನಗಣತಿಯ ನಂತರ ಮರುವಿಂಗಡಣೆಗೆ ಯಾವುದೇ ಆಯೋಗಗಳನ್ನು ನೇಮಿಸಲಾಗಿಲ್ಲ. 2026ರಲ್ಲಿ ಫ್ರೀಜ್ ಕೊನೆಗೊಳ್ಳುವುದರಿಂದ, ಸಂವಿಧಾನದ ನಿಯಮಗಳ ಪ್ರಕಾರ ಮರುವಿಂಗಡಣೆ ಮಾಡುವುದು ಅಗತ್ಯವಾಗಿರುವ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಇತ್ತೀಚಿನ ಜನಸಂಖ್ಯೆ ಪ್ರಕಾರ ಕ್ಷೇತ್ರ ಮರುವಿಂಗಡಣೆ ಮಾಡುವುದರಿಂದ ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳಿಗೆ ಪ್ರಾತಿನಿಧ್ಯ ಕಡಿಮೆಯಾಗಲಿದೆ ಎನ್ನುವುದು ಮೊದಲ ಆಕ್ಷೇಪಣೆಯಾಗಿದೆ.
ರಾಜ್ಯಗಳ ಜನಸಂಖ್ಯೆ ಬೆಳವಣಿಗೆ ದರದಲ್ಲಿ ವೈವಿಧ್ಯತೆ ಇರುವುದರಿಂದ ಈ ಅಸಮಾನತೆ ಉಂಟಾಗಿದೆ. ಕೆಲವು ರಾಜ್ಯಗಳು ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ಕ್ರಮಗಳ ಮೂಲಕ ಜನಸಂಖ್ಯೆ ಬೆಳವಣಿಗೆಯಲ್ಲಿ ತೀವ್ರ ಕುಸಿತ ಕಂಡಿವೆ. ಅದೇ ವೇಳೆ ಇತರ ರಾಜ್ಯಗಳ ಜನಸಂಖ್ಯೆಯಲ್ಲಿ ಭಾರಿ ಬೆಳವಣಿಗೆಯಾಗಿದೆ. ಅದರ ಪರಿಣಾಮವಾಗಿ, ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕೆ ಅಂಥ ರಾಜ್ಯಗಳು ಶಿಕ್ಷೆ ಅನುಭವಿಸಬೇಕಾಗಿದೆ.
ಜನಸಂಖ್ಯೆ ನಿಯಂತ್ರಿಸದ ರಾಜ್ಯಗಳಿಗೆ ಹೆಚ್ಚುವರಿ ಸೀಟುಗಳ ಬಹುಮಾನ ಸಿಗಲಿದೆ. ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಕೂಡ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿವೆ. ಈ ಕಾರಣಕ್ಕಾಗಿಯೇ ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣದ ರಾಜ್ಯಗಳು ಕ್ಷೇತ್ರಗಳ ಮರುವಿಂಗಡಣೆಗೆ ಜನಸಂಖ್ಯೆಯ ಅಂಕಿಅಂಶಗಳನ್ನು ಬಳಸುವುದನ್ನು ಬಲವಾಗಿ ವಿರೋಧಿಸುತ್ತಿವೆ.
ಅಸಮಾನ ಹಂಚಿಕೆಗೆ ವಿರೋಧ
ಮಾಧ್ಯಮದಲ್ಲಿ ವರದಿಯಾಗಿರುವಂತೆ, ಲೋಕಸಭೆಯ ಒಟ್ಟು ಸ್ಥಾನಗಳು ಕೂಡ ಈಗಿನ 543ರಿಂದ 848ಕ್ಕೆ ಏರಿದರೂ, ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯಾದಲ್ಲಿ ದಕ್ಷಿಣದ ಐದು ರಾಜ್ಯಗಳು ಒಟ್ಟು 40 ಹೆಚ್ಚುವರಿ ಸ್ಥಾನಗಳನ್ನು ಪಡೆಯಲಿವೆ. ಆದರೆ, ಉತ್ತರ ಪ್ರದೇಶ ರಾಜ್ಯವೊಂದೇ 63 ಸ್ಥಾನ ಹಾಗೂ ಬಿಹಾರ 39 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗಳಿಸಲಿವೆ. ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿರುವುದು ಈ ಅಸಮಾನ ಹಂಚಿಕೆಯನ್ನೇ.
ಇದನ್ನೂ ಓದಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ KRS ಡ್ಯಾಂನಿಂದ ನೀರು ಪೋಲು
ಇತ್ತೀಚಿನ ಜನಗಣತಿ ಅಂಕಿಸಂಖ್ಯೆ ಆಧರಿಸಿದ ಕ್ಷೇತ್ರ ಮರುವಿಂಗಡಣೆಗೆ ಬಂದಿರುವ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ದಕ್ಷಿಣದ ರಾಜ್ಯಗಳು ಸೀಟು ಕಳೆದುಕೊಳ್ಳುವುದಿಲ್ಲ; ಪ್ರಮಾಣಿತ (ಪ್ರೊ-ರೇಟ್) ಸ್ಥಾನಮಾನದ ಆಧಾರದಲ್ಲಿ ಹೆಚ್ಚುವರಿ ಸ್ಥಾನಗಳನ್ನು ಪಡೆಯಲಿವೆ ಎಂದು ಹೇಳಿದ್ದಾರೆ. ಆದರೆ, ಪ್ರೊ-ರೇಟಾ ಲೆಕ್ಕಾಚಾರವು ಪ್ರಸಕ್ತ ಸೀಟುಗಳ ಆಧಾರದಲ್ಲಿ ಇರುತ್ತದೋ ಅಥವಾ ಇತ್ತೀಚಿನ ಜನಸಂಖ್ಯೆ ಆಧಾರದಲ್ಲಿರುತ್ತದೆಯೋ ಎಂಬುದನ್ನು ಅವರ ಹೇಳಿಕೆ ಸ್ಪಷ್ಟಪಡಿಸದಿರುವುದರಿಂದ ಅದು ಅಸ್ಪಷ್ಟವಾಗಿಯೇ ಉಳಿದಿದೆ. ಒಂದು ವೇಳೆ ಈಚಿನ ಜನಸಂಖ್ಯೆ ಆಧಾರದಲ್ಲೇ ಮರುವಿಂಗಡಣೆ ಆದ ಪಕ್ಷದಲ್ಲಿ ಉತ್ತರದ ರಾಜ್ಯಗಳು ಏರಿಕೆಯಾದ ಸ್ಥಾನಗಳಲ್ಲಿ ಅಸಮಾನ ಪಾಲನ್ನು ಪಡೆಯುವುದು ಖಂಡಿತ.
ಪ್ರಸ್ತುತ ಪರಿಸ್ಥಿತಿಯಲ್ಲಿ ಉತ್ತಮ ವಿಧನವೆಂದರೆ
ಸದ್ಯದ ಪರಿಸ್ಥಿತಿಯಲ್ಲಿ, ಪ್ರತಿ ರಾಜ್ಯ ಹಾಲಿ ಹೊಂದಿರುವ ಸ್ಥಾನಗಳ ಆಧಾರದಲ್ಲಿ ಪ್ರೊ-ರೇಟಾ ಏರಿಕೆಯನ್ನು ಅಳವಡಿಸಿಕೊಳ್ಳುವುದು ಉತ್ತಮ ವಿಧಾನವಾಗುತ್ತದೆ. ಜನರಿಗೆ ಉತ್ತಮ ಪ್ರಾತಿನಿಧ್ಯ ಒದಗಿಸುವುದನ್ನು ಖಾತರಿಪಡಿಸುವುದು ಒಟ್ಟು ಸ್ಥಾನಗಳ ಏರಿಕೆಯ ಉದ್ದೇಶವಾಗಿದ್ದರೆ, ರಾಜ್ಯಗಳು ಈಗಿರುವ ಸ್ಥಾನಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ನೆರವಾಗುವ ಈ ಧೋರಣೆಯನ್ನು ಅನುಸರಿಸುವುದು ಒಳ್ಳೆಯದು. ಈ ವಿಧಾನದಲ್ಲಿ, ಪ್ರತಿ ರಾಜ್ಯಕ್ಕೂ ಜನಸಂಖ್ಯೆ ಬೆಳವಣಿಗೆ ಬದಲಿಗೆ ಹಾಲಿ ಸ್ಥಾನಗಳ ಆಧಾರದಲ್ಲಿ ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ.
ಉದಾಹರಣೆಗೆ ಹೇಳುವುದಾದರೆ, ಒಟ್ಟು ಸಂಖ್ಯೆಯನ್ನು 800ಕ್ಕೆ ಏರಿಸಿದರೆ, ಈಗ 543ರಲ್ಲಿ 39 ಸ್ಥಾನ ಹೊಂದಿರುವ ತಮಿಳುನಾಡಿಗೆ ಹೆಚ್ಚುವರಿಯಾಗಿ 18 ಸೀಟುಗಳು ದೊರಕಿ ಒಟ್ಟು ಕ್ಷೇತ್ರಗಳ ಸಂಖ್ಯೆ 57 ಆಗಲಿದೆ. ಅದು ಈಗ ಹೊಂದಿರುವ ಒಟ್ಟಾರೆ ಸ್ಥಾನಗಳ ಅನುಪಾತದಲ್ಲಿಯೂ ಅಷ್ಟೇ ಆಗುತ್ತದೆ. ಈ ಸೂತ್ರದ ಪ್ರಕಾರ, ಕೇರಳಕ್ಕೆ ಈಗಿನ 20 ಸ್ಥಾನಕ್ಕೆ ಹೆಚ್ಚುವರಿಯಾಗಿ 9 ಸ್ಥಾನ ಸಿಕ್ಕಿ ಒಟ್ಟು 29 ಕ್ಷೇತ್ರಗಳಾಗಲಿವೆ. ಈಗ 80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ ಹೆಚ್ಚುವರಿಯಾಗಿ 38 ಸ್ಥಾನ ಲಭಿಸಿ ಒಟ್ಟು 118 ಸ್ಥಾನ ಆಗಲಿದೆ. ಬಿಹಾರಕ್ಕೆ ಹೆಚ್ಚುವರಿಯಾಗಿ 24 ಸೀಟು ಲಭ್ಯವಾಗಿ ಒಟ್ಟು 79 ಆಗಲಿದೆ.
ಇವೆಲ್ಲವೂ ಅವುಗಳು ಈಗ ಹೊಂದಿರುವ ಸ್ಥಾನಗಳ ಅದೇ ಅನುಪಾತದಲ್ಲಿ ಇರಲಿವೆ. ಹೀಗಾಗಿ, ಉತ್ತಮ ಪ್ರಾತಿನಿಧ್ಯಕ್ಕಾಗಿ ಲೋಕಸಭೆ ಸೀಟುಗಳ ಒಟ್ಟು ಸಂಖ್ಯೆಯನ್ನು ಏರಿಸುವಾಗ ಯಾವುದೇ ರಾಜ್ಯವು ಈಗ ಹೊಂದಿರುವ ಸ್ಥಾನಗಳ ಅನುಪಾತದಲ್ಲಿ ಸ್ಥಾನ ಇಳಿಕೆಯ ಸಂತ್ರಸ್ತ ರಾಜ್ಯ ಆಗುವುದಿಲ್ಲ. ಆದರೆ ಈ ಸೂತ್ರದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೆ ಮರುವಿಂಗಡಣೆ ಪ್ರಕ್ರಿಯೆಯನ್ನು ಇನ್ನೂ 25 ಮುಂದೂಡುವುದೇ ಉಳಿದಿರುವ ಪರ್ಯಾಯ ಮಾರ್ಗವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾರ್ಚ್ 22ರಂದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್‌ಗಳ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ವ್ಯವಸ್ಥೆಗೊಳಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚಿಸಿ ಒಮ್ಮತಕ್ಕೆ ಬರುವುದು ಅದರ ಉದ್ದೇಶವಾಗಿದೆ. ಈ ಜಂಟಿ ಸಭೆ ಕೈಗೊಳ್ಳುವ ನಿಲವು, ಮರುವಿಂಗಡಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಬೇಕಿದೆ.
ಇದನ್ನೂ ನೋಡಿ: ವರ್ತಮಾನದಲ್ಲಿ ಸುಳ್ಳಿನ ಇತಿಹಾಸ ಸೃಷ್ಟಿಸುತ್ತಿರುವ ಆರೆಸ್ಸೆಸ್…