ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಎಸ್ ಬಾಲನ್ ಲೀಗಲ್ ನೋಟಿಸ್
ಬೆಂಗಳೂರು: ಧರ್ಮಸ್ಥಳದ ವಕೀಲರು ಲೀಗಲ್ ನೋಟಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ-ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಹೋರಾಟಗಾರರ ಪರವಾಗಿ ಎಸ್ ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ.
ಎಸ್ ಬಾಲನ್ ಅವರು ನೀಡಿರುವ ಲೀಗಲ್ ನೋಟಿಸ್ ನಲ್ಲಿ ”ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ನೀಡಲಾದ ಲೀಗಲ್ ನೋಟಿಸ್ ಗೆ ವಿಳಾಸ, ಲೆಟರ್ ಹೆಡ್, ಸಂಪರ್ಕ ಸೇರಿದಂತೆ ಯಾವುದೇ ತಲೆ-ಬಾಲ ಇಲ್ಲವಾಗಿದ್ದು, ಸೌಜನ್ಯ ಪರ ಹೋರಾಟಗಾರರನ್ನು ದಾರಿ ತಪ್ಪಿಸಲು ಹೈಕೋರ್ಟ್ ಅದೇಶವನ್ನು ತಿರುಚಿ ವಂಚನೆ ಮಾಡಲಾಗಿದೆ” ಎಂದು ವಿವರಿಸಿದ್ದಾರೆ.
ಹಿರಿಯ ವಕೀಲ ಎಸ್ ಬಾಲನ್ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿರುವ ಲೀಗಲ್ ನೋಟಿಸ್ ನ ಸಾರಾಂಶ :
ಇದನ್ನೂ ಓದಿ: ಶುಶ್ರೂಷಕಿ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ: 2 ಆರೋಪಿಗಳ ಬಂಧನ
ನನ್ನ ಕಕ್ಷಿಗಾರರಾಗಿರುವ ಬೈರಪ್ಪ ಹರೀಶ್ ಕುಮಾರ್ ಅವರು 5,776 ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಕೌಂಟ್ ಗೆ ಪಾವತಿಸಿ, “ಸಾಹಿತಿಗಳ ಸಮಲೋಚನಾ ಸಭೆ” ಗೆ ಅಕ್ಕಮಹಾದೇವಿ ಸಭಾಂಗಣವನ್ನು ಬುಕ್ ಮಾಡಿದ್ದರು. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಸ್ವಿಕೃತಿ ಪ್ರತಿಯನ್ನು ನೀಡಿದೆ. ಅದರಂತೆ 09.03.2025 ರ ಸಾಹಿತಿಗಳ ಸಮಾಲೋಚನಾ ಸಭೆಗೆ ಸಿದ್ದತೆ ನಡೆಸಲಾಗಿತ್ತು.
ಈ ಮಧ್ಯೆ ದಿನಾಂಕ 08/03/2025 ರಂದು ಮಹೇಶ್ ಜೋಶಿಯು ಹೋರಾಟಗಾರರಾದ ಬೈರಪ್ಪ ಹರೀಶ್ ಕುಮಾರ್ ಅವರ ಮೊಬೈಲ್ ಗೆ ಕರೆ ಮಾಡಿ “ಧರ್ಮಸ್ಥಳದ ವಕೀಲರೊಬ್ಬರು ಲೀಗಲ್ ನೋಟಿಸ್ ನೋಟಿಸ್ ಮತ್ತು ಹೈಕೋರ್ಟ್ ರಿಟ್ ಆದೇಶದ ಪ್ರತಿ ನೀಡಿದ್ದಾರೆ. ಆ ಕಾರಣಕ್ಕಾಗಿ ಸಭಾಂಗಣದ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗುವುದು” ಎಂದು ತಿಳಿಸಿದರು.
ಧರ್ಮಸ್ಥಳದ ವಕೀಲರು ನೀಡಿದ್ದಾರೆ ಎಂದು ಕಳುಹಿಸಲಾದ ಲೀಗಲ್ ನೋಟಿಸ್ ನಲ್ಲಿ ಸದ್ರೀ ವಕೀಲನ ವಿಳಾಸ, ಇ-ಮೇಲ್ ಐಡಿ, ದೂರವಾಣಿ ಸಂಖ್ಯೆ ಇತ್ಯಾದಿಗಳು ಯಾವುದೂ ನಮೂದಿಸಲಾಗಿಲ್ಲ. ಎಸ್. ರಾಜಶೇಖರ್ ಎಂಬ ಹೆಸರಿನ ವಕೀಲರು ಯಾರು ? ಅವರು ವೃತ್ತಿನಿರತರಾಗಿರುವ ಸ್ಥಳ ಯಾವುದು ಎಂಬ ಬಗೆಗಿನ ಯಾವ ಮಾಹಿತಿಯೂ ಇಲ್ಲವಾಗಿದ್ದು, ಖಾಲಿ ಹಾಳೆಯಲ್ಲಿ ನೋಟಿಸ್ ನೀಡಲಾಗಿದೆ.
ಧರ್ಮಸ್ಥಳದ ವಕೀಲರು ಎಂಬ ನೆಲೆಯಲ್ಲಿ ರಾಜಶೇಖರ್ ಎಂಬ ವಕೀಲರ ಹೆಸರಿನಲ್ಲಿ ವಿವಿಪುರಂ ಪೊಲೀಸ್ ಇನ್ಸ್ ಪೆಕ್ಟರ್ ಗೂ ನೋಟಿಸ್ ನೀಡಲಾಗಿದ್ದು, ಸದ್ರಿ ನೋಟಿಸ್ ಅನ್ನು ವಿವಿಪುರಂ ಇನ್ಸ್ ಪೆಕ್ಟರ್ ಕೂಡಾ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡಿದ್ದಾರೆ.
ಧರ್ಮಸ್ಥಳದ ವಕೀಲರು ನೀಡಿದ ನೋಟಿಸಿನ ಪ್ಯಾರಾ ಸಂಖ್ಯೆ 2 ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ. “ದಿನಾಂಕ: 04/07/2024 ರಂದು WP ಸಂಖ್ಯೆ 19320/2023 ರಲ್ಲಿನ ಆದೇಶದ ಪ್ರಕಾರ ಜಸ್ಟಿಸ್ ಪಾರ್ ಸೌಜನ್ಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಕಾರ್ಯಗಳನ್ನು ಯಾರೂ ಕೂಡಾ ನಡೆಸದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ” ಎಂದು ಬರೆಯಲಾಗಿದೆ. ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ರಾಜಶೇಖರ್ ಎಂಬವರು ಉಲ್ಲೇಖಿಸಿರುವ ಈ ವಾದ ಅಥವಾ ಹೇಳಿಕೆಗಳು ವಂಚನೆ ಮಾತ್ರವಲ್ಲ, ಹಾಸ್ಯಾಸ್ಪದವೂ ಆಗಿದೆ.
ಮಾನ್ಯ ಹೈಕೋರ್ಟ್‌ನ ಆದೇಶದಲ್ಲಿನ ವಾಕ್ಯವನ್ನು ಈ ಕೆಳಗಿನಂತೆ ಪುನರುಚ್ಚರಿಸುತ್ತೇವೆ : “ಜಸ್ಟೀಸ್ ಫಾರ್ ಸೌಜನ್ಯ ಅಥವಾ ಇತರ ಯಾವುದೇ ಹೆಸರಿನಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು/ಕಾರ್ಯವನ್ನು ನಡೆಸಲು ಮತ್ತು ಈ ನ್ಯಾಯಾಲಯವು ಸೂಕ್ತವೆಂದು ಪರಿಗಣಿಸಬಹುದಾದ ಇತರ ಪರಿಹಾರಗಳನ್ನು ನೀಡಲು ಯಾವುದೇ ಅನುಮತಿ/ಪರವಾನಗಿಯನ್ನು ನೀಡದಂತೆ ಅರ್ಜಿದಾರರು/ಪೊಲೀಸರಿಗೆ ಸೂಕ್ತ ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ”
ಆದೇಶದ ಪ್ಯಾರಾ ಸಂಖ್ಯೆ 5 ಸ್ಪಷ್ಟವಾಗಿದ್ದು, “ಆದ್ದರಿಂದ, ಹಿರಿಯ ವಕೀಲರು I.A. ಸಂಖ್ಯೆ 4/2024 ರಲ್ಲಿ ಮಾಡಿದ ಪ್ರಾರ್ಥನೆಯನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ. ಜಸ್ಟೀಸ್ ಫಾರ್ ಸೌಜನ್ಯ ಎಂದು ಉಲ್ಲೇಖಿಸುವ I.A. ಸಂಖ್ಯೆ 4 ರ ಪ್ರಾರ್ಥನೆಯನ್ನು ಆರಂಭದಲ್ಲಿ ಪರಿಗಣಿಸಲಾಗಿತ್ತು ಎಂಬುದನ್ನು ಗಮನಿಸಬೇಕು. ಅದು ಏನೇ ಇರಲಿ, ಆ ಬಳಿಕ I.A. ಸಂಖ್ಯೆ 4 ಅನ್ನು ನಂತರ ಹಿಂತೆಗೆದುಕೊಳ್ಳಲಾಯಿತು” ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಮೇಲೆ ಉಲ್ಲೇಖಿಸಲಾದ ರಿಟ್ ಅರ್ಜಿಯ ಅಂತಿಮ ಆದೇಶವೆಂದರೆ, ಯಾವುದೇ ವ್ಯಕ್ತಿಯು ಅವಹೇಳನಕಾರಿಯಾಗಿ ಯಾವುದೇ ಹೇಳಿಕೆಯನ್ನು ನೀಡಿದರೆ ಅಥವಾ ಅಂತಹ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದರೆ, ಪ್ರತಿವಾದಿ ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಪರಾಧ ನಡೆದರೆ, ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳುವುದು ಪೊಲೀಸರ ಬದ್ಧ ಕರ್ತವ್ಯ ಎಂದು ಹೇಳಲಾಗಿದೆ.
ಆದರೆ ಹೈಕೋರ್ಟ್ ನ ಈ ಸ್ಪಷ್ಟ ಆದೇಶವನ್ನು ತಿರುಚಿ, ಧರ್ಮಸ್ಥಳದ ಬಗ್ಗೆ ಯಾರೂ ಮಾತನಾಡಬಾರದು ಎಂದು ಬಿಂಬಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಸಾಹಿತಿ-ಚಿಂತಕರು “ಸಾಹಿತಿಗಳ ಸಮಾಲೋಚನಾ ಸಭೆ” ನಡೆಸಲು ಯೋಜಿಸಿದ್ದು, ಅದರಲ್ಲಿ ‘ಧರ್ಮಸ್ಥಳ ಫೈಲ್ಸ್’ ಕೂಡಾ ಚರ್ಚೆಯಾಗಬಹುದು. ಅದಕ್ಕೂ ಹೈಕೋರ್ಟ್ ಆದೇಶದಕ್ಕೂ ಸಂಬಂಧವಿಲ್ಲ.
ಹಾಗಾಗಿ, ತಲೆ ಮತ್ತು ಬಾಲವಿಲ್ಲದ ಲೀಗಲ್ ನೋಟಿಸ್ ಆಧಾರದ ಮೇಲೆ ನೀವು , ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಮ್ಮ ಕಕ್ಷಿದಾರರ ಹಾಲ್ ಬುಕಿಂಗ್ ಅನ್ನು ಹೇಗೆ ರದ್ದುಗೊಳಿಸಿದ್ದೀರಿ ? ಹಾಲ್ ಬುಕ್ಕಿಂಗ್ ರದ್ದತಿಗೆ ಕಾರಣವಾದ ಲೀಗಲ್ ನೋಟಿಸ್ ನೀಡಿದ ವಕೀಲರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಲಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ ಗೆ ಲೀಗಲ್ ನೋಟಿಸ್ ನೀಡಿದ ಧರ್ಮಸ್ಥಳ ಪರ ವಕೀಲ ರಾಜಶೇಖರ್ ಯಾರು? ಅವರ ವಿಳಾಸ ಯಾವುದು? ಅವರ ದೂರವಾಣಿ ಸಂಖ್ಯೆ, ಅವರ ಇಮೇಲ್ ಅಡ್ರಸ್ ಗಳನ್ನು ತಾವು ಒದಗಿಸಬೇಕು.
ಹೈಕೋರ್ಟ್ ಆದೇಶವನ್ನು ತಿರುಚಿ, ತಲೆ-ಬಾಲ ಇಲ್ಲದ ವಂಚನೆಯ ಲೀಗಲ್ ನೋಟಿಸ್ ಮೂಲಕ ಸಾಹಿತಿಗಳ ಸಮಾಲೋಚನಾ ಸಭೆಯನ್ನು ರದ್ದು ಮಾಡಿರುವ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಈ ಲೀಗಲ್ ನೋಟಿಸ್ ತಲುಪಿದ 7 ದಿನಗಳ ಒಳಗೆ ನನ್ನ ಕಕ್ಷಿಗಾರ ಬೈರಪ್ಪ ಹರೀಶ್ ಕುಮಾರ್ ಅವರಿಗೆ ಒಂದು ಲಕ್ಷ ರೂಗಳನ್ನು ಪಾವತಿಸಬೇಕು. ಮತ್ತು, ನೋಟಿಸ್ ಮೂಲಕ ವಂಚಿಸಿರುವ ತಲೆ-ಬಾಲ ಇಲ್ಲದ ವಕೀಲರ ವಿಳಾಸವನ್ನು ಒದಗಿಸಬೇಕು. ಇಲ್ಲದೇ ಇದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ.
ಇದು ಹಿರಿಯ ವಕೀಲರಾಗಿರುವ ಎಸ್ ಬಾಲನ್ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿರುವ ಲೀಗಲ್ ನೋಟಿಸ್ ಆಗಿದ್ದು, ಈ ನೋಟಿಸ್ ನಲ್ಲಿ ಧರ್ಮಸ್ಥಳದ ಪರ ವಕೀಲರ ಹೆಸರಿನಲ್ಲಿ ನಡೆದಿರುವ ವಂಚನೆಯನ್ನು ಬಯಲಿಗೆಳೆಯಲಾಗಿದೆ. ಧರ್ಮಸ್ಥಳ ಮತ್ತು ಸೌಜನ್ಯ ಕೊಲೆಯ ಬಗ್ಗೆ ಜಗತ್ತಿನ ಯಾರೂ ಮಾತನಾಡಬಾರದು ಎಂದು ಯಾವ ನ್ಯಾಯಾಲಯಗಳೂ ಆದೇಶ ನೀಡಲು ಸಾದ್ಯವಿಲ್ಲ. ಅವಹೇಳನಕಾರಿಯಾಗಿ ಯಾರೇ ಯಾರ ವಿರುದ್ದ ಮಾತನಾಡಿದರೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುವ ಸಹಜ ನ್ಯಾಯದ ಉವಾಚನ್ನೇ ತಿರುಚಿ ಸೌಜನ್ಯ ಕೊಲೆ-ಅತ್ಯಾಚಾರದ ವಿರುದ್ದದ ಸಭೆಯನ್ನೇ ವಂಚನೆಯಿಂದ ರದ್ದುಗೊಳಿಸಲಾಗಿದೆ. ಈ ರೀತಿ ದಾರಿ ತಪ್ಪಿಸಿದವರ ವಿರುದ್ದ ಕಾನೂನು ಕ್ರಮದ ಮೊದಲ ಹೆಜ್ಜೆ ಪ್ರಾರಂಭವಾಗಿದೆ ಎಂದು ಎಸ್ ಬಾಲನ್ ತಿಳಿಸಿದ್ದಾರೆ.
ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್ ಅಧಿವೇಶನ