ಮಂಗಳೂರು: ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಮತೀಯ ಸಂಘರ್ಷಕ್ಕೆ ಯತ್ನಿಸಿದ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ಸಂಘಪರಿವಾರದ ಪ್ರಮುಖರ ಮೇಲೆ ಸು ಮಟೋ ಮೊಕದ್ದಮೆ ಹೂಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಎಸ್ ಪಿ ಅವರನ್ನು “ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ” ಯ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ಬಂಟ್ವಾಳ ತಾಲೂಕು ಫರಂಗಿಪೇಟೆಯ ನಿವಾಸಿ, ಹದಿಹರೆಯದ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ವಿದ್ಯಾರ್ಥಿಯ ಸುರಕ್ಷಿತ ಪತ್ತೆಯ ಮೂಲಕ ಸುಖಾಂತ್ಯ ಕಂಡಿದೆ. ದಿಗಂತ್ ಪತ್ತೆಗೆ ಅಪಾರ ಶ್ರಮ ವಹಿಸಿದ ಪೊಲೀಸ್ ಇಲಾಖೆಯ ಕ್ರಮಗಳನ್ನು ನಾವು ಶ್ಲಾಘಿಸಿದ್ದಾರೆ. ದಿಗಂತ್
ಆದರೆ, ವಿದ್ಯಾರ್ಥಿ ದಿಗಂತ ನಾಪತ್ತೆಯ ವಿಚಾರ ಬಹಿರಂಗಗೊಂಡ ಕ್ಷಣದಿಂದ ಬಜರಂಗ ದಳ ಸಹಿತ ಸಂಘಪರಿವಾರದ ಸಂಘಟನೆಗಳು ಹಾಗು ಬಿಜೆಪಿ ಪ್ರಮುಖರು ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ, ಅಪನಂಬಿಕೆಯನ್ನು ಹೆಚ್ಚಿಸುವ ಕೆಲಸ ನಡೆಸಿದ್ದಾರೆ. ಯಾವ ಸಣ್ಣ ಆಧಾರವೂ ಇಲ್ಲದೆ, “ವಿದ್ಯಾರ್ಥಿ ದಿಗಂತ್ ನನ್ನುಅಪಹರಣ ನಡೆಸಲಾಗಿದೆ, ಮುಸ್ಲಿಂ ಸಮುದಾಯ ಈ ಘಟನೆಯ ಹಿಂದಿದೆ” ಎಂದು ಕತೆಕಟ್ಟಲಾಗಿದೆ ಎಂದು ನಿಯೋಗ ದೂರಿದೆ.
ಇದನ್ನೂ ಓದಿ: ನೌಕರರಲ್ಲಿ ಶಕ್ತಿ ಇದ್ದಾಗ ದುಡಿಸಿ ವಯಸ್ಸಾದಾಗ ಕೈಬಿಟ್ಟರೆ ದಂಡ: ಹೈಕೋರ್ಟ್
ಮಾಧ್ಯಮಗಳಿಗೂ ಅದೇ ಅರ್ಥದ ಹೇಳಿಕೆ ನೀಡಲಾಗಿದೆ. ಅದರ ಜೊತೆಗೆ ಫರಂಗಿಪೇಟೆ ಪರಿಸರದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನೇ ಗುರಿಯಾಗಿಸಿ “ಅಮ್ಮೆಮಾರ್ ಪ್ರದೇಶದಲ್ಲಿ ಬಹು ಸಂಖ್ಯಾತರು ಓಡಾಡುವುದೇ ಕಷ್ಟವಾಗಿದೆ, ಅಲ್ಲಿ ಓಡಾಡುವವರಿಗೆ ಜೀವ ಭಯ ಒಡ್ಡಲಾಗುತ್ತದೆ, ಗಾಂಜಾ ವ್ಯಸನಿಗಳು, ಪೆಡ್ಲರ್ ಗಳು, ಕ್ರಿಮಿನಲ್ ಗಳು ಅಮ್ಮೆಮಾರ್ ನಲ್ಲಿ ತುಂಬಿಕೊಂಡಿದ್ದಾರೆ” ಎಂದು ಇಡಿಯಾಗಿ ಒಂದು ಊರು ಹಾಗೂ ಸಮುದಾಯವನ್ನು ಕ್ರಿಮಿನಲೀಕರಣಗೊಳಿಸಿ ತೀರಾ ಕೆಟ್ಟದಾಗಿ ಆರೋಪಿಸಲಾಗಿದೆ. ಮತೀಯ ದ್ವೇಷ, ಪೂರ್ವಾಗ್ರಹಗಳನ್ನು ಹುಟ್ಟಿಸಲು ಯತ್ನಿಸಲಾಗಿದೆ.
ಇಷ್ಟು ಸಾಲದು ಎಂಬಂತೆ, ನಾಪತ್ತೆ ಪ್ರಕರಣದ ಸರಿಯಾದ ತನಿಖೆಗೆ ಅವಕಾಶ ಕೊಡದೆ ಮತೀಯತೆಯ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ತೀರಾ ಒತ್ತಡಕ್ಕೆ ಸಿಲುಕಿಸಲಾಗಿದೆ, ಪೊಲೀಸ್ ಇಲಾಖೆಯನ್ನು “ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳು” ಎಂದು ವಿನಾಕಾರಣ ಆರೋಪಿಸಲಾಗಿದೆ. ಫರಂಗಿ ಪೇಟೆ ಬಂದ್ ದಿವಸ ಮಂಗಳೂರು ಉತ್ತರ ಹಾಗೂ ಬೆಳ್ತಂಗಡಿಯ ಬಿಜೆಪಿ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ಮುಂದಾಳುಗಳು ದ್ವೇಷ ಭಾಷಣ ಮಾಡಿದ್ದಾರೆ.
ಮತೀಯ ಉದ್ವಿಗ್ನತೆ ಕೆರಳಿಸುವ ರೀತಿಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಆ ಮೂಲಕ ಧರ್ಮಗಳ ನಡುವೆ ಸಂಘರ್ಷವನ್ನು ಹುಟ್ಟಿಸಲು ಯತ್ನಿಸಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಕ್ರಿಮಿನಲ್ ಸಮುದಾಯ ಎಂಬ ಭಾವನೆ ಹುಟ್ಟುವ ರೀತಿಯ ಮಾತುಗಳನ್ನು ಆಡಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಅಪಾಯಕಾರಿ ವಲಯ, ಅಪರಾಧಿಗಳ ನೆಲೆ ಎಂಬ ಆರೋಪ ಮಾಡಿದ್ದಾರೆ. ಮುಸ್ಲಿಮರು ಮಾತ್ರ ಗಾಂಜಾ, ಡ್ರಗ್ಸ್ ದಂಧೆ ನಡೆಸುತ್ತಾರೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.
ಇದು ನೆಲದ ಕಾನೂನು ಹಾಗು ಸಂವಿಧಾನದ ಜಾತ್ಯಾತೀತ ಆಶಯಗಳಿಗೆ, ನಿಯಮಗಳಿಗೆ ವಿರುಧ್ದ ವಾಗಿದೆ. ಮೊದಲೆ ಕೋಮು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿರುವ ಫರಂಗಿ ಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ, ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಪ್ರಕರಣಕ್ಕೆ ಮತೀಯ ಬಣ್ಣ ಹಚ್ಚಿದ, ಒಂದು ಸಮುದಾಯವನ್ನು ಅಪಾರಾಧಿ ಸಮುದಾಯ ಎಂದು ಹಣೆಪಟ್ಟಿ ಕಟ್ಟಿದ, ಮುಸ್ಲಿಂ ಬಾಹುಳ್ಯದ ಊರುಗಳು ಕ್ರಿಮಿನಲ್ ಗಳು ತುಂಬಿದ ಅಪಾಯಕಾರಿ ವಲಯಗಳು ಎಂದು ಆರೋಪ ಹೊರಿಸಿದೆ.
ಕೋಮು ಸಂಘರ್ಷಕ್ಕೆ ಪ್ರಚೋದಿಸಿದ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ಹಾಗೂ ಬಜರಂಗದಳದ ಭರತ್ ಕುಂಬ್ಡೇಲು ಮತ್ತಿತರರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕದ್ದಮೆ ಹೂಡಬೇಕು, ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು “ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ” ಯ ಪ್ರಮುಖರ ನಿಯೋಗ ಆಗ್ರಹಿಸಿದೆ.
ನಿಯೋಗದಲ್ಲಿ ವೇದಿಕೆಯ ಸಂಚಾಲಕ, ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ರಾಜ್ಯ ವಕ್ತಾರ ಎಮ್ ಜಿ ಹೆಗ್ಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ, ಆಮ್ ಆದ್ಮಿಯ ಎಸ್ ಎಲ್ ಪಿಂಟೊ, ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಕೆ ಅಶ್ರಫ್, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಎಐಟಿಯುಸಿ ಮುಂದಾಳು ಎಚ್ ವಿ ರಾವ್, ಕಾರ್ಮಿಕ ಮುಂದಾಳುಗಳಾದ ವಿ ಕುಕ್ಯಾನ್, ಸೀತಾರಾಮ ಬೇರಿಂಜೆ, ಡಿವೈಎಫ್ಐ ನ ಬಿ ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಪ್ರಮೀಳಾ ಕೆ, ಎಸ್ಎಫ್ಐ ನ ವಿನುಷ ರಮಣ, ಸಮುದಾಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು, ವಿವಿಧ ಸಂಘಟನೆಗಳ ಮುಂದಾಳುಗಳಾದ ಸರೋಜಿನಿ ಬಂಟ್ವಾಳ, ಕರುಣಾಕರ ಮಾರಿಪಳ್ಳ, ಸಮರ್ಥ್ ಭಟ್, ನೀತ್ ಶರಣ್, ಯೋಗಿತಾ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ರಾಜ್ಯ ಬಜೆಟ್ 2025 – ನುಡಿದಂತೆ ನಡೆಯದ ಸರ್ಕಾರ – ಎಸ್.ವರಲಕ್ಷ್ಮಿ Janashakthi Media