ನವದೆಹಲಿ: ಐದು ಎಡಪಕ್ಷಗಳಾದ ಸಿಪಿಐ(ಎಂ) , ಸಿಪಿಐ , ಸಿಪಿಐ(ಎಂಎಲ್) ಲಿಬರೇಶನ್, ಆರ್‌ಎಸ್‍ಪಿ ಮತ್ತು ಎಐಎಫ್‍ಬಿ ಉಪರಾಷ್ಟ್ರಪತಿ ಚುನಾವಣೆಯ ಕುರಿತು ಒಂದು ಜಂಟಿ ಮನವಿಯನ್ನು ಪ್ರಕಟಿಸಿವೆ.
ಎಡ ಪಕ್ಷಗಳು, ಎಲ್ಲಾ ವಿರೋಧ ಪಕ್ಷಗಳ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ (ನಿವೃತ್ತ) ಅವರ ಉಮೇದುವಾರಿಕೆಯನ್ನು ಅನುಮೋದಿಸುತ್ತೇವೆ ಎಂದಿರುವ ಹೇಳಿಕೆ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಒಬ್ಬ ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿದ್ದು, ಭಾರತೀಯ ಸಂವಿಧಾನದ ಮೂಲ ಮೌಲ್ಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಮಾನತೆಗೆ ತಮ್ಮ ಅಚಲ ಬದ್ಧತೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ ಎಂದು ಹೇಳಿದೆ.
ಉಪರಾಷ್ಟ್ರಪತಿ ಚುನಾವಣೆಯು ಕೇವಲ ಸಂಖ್ಯೆಗಳ ಬಗ್ಗೆ ಅಲ್ಲ. ಇದು ಭಾರತದ ಭವಿಷ್ಯದ ಬಗ್ಗೆ ಎರಡು ಮೂಲಭೂತವಾಗಿ ಭಿನ್ನವಾದ ದೃಷ್ಟಿಕೋನಗಳ ನಡುವಿನ ಸ್ಪರ್ಧೆಯನ್ನು ಪ್ರತಿನಿಧಿಸುತ್ತದೆ – ಇದು ನಮ್ಮ ರಾಷ್ಟ್ರವು ಜಾತ್ಯತೀತತೆಯನ್ನು ಎತ್ತಿಹಿಡಿಯುವ ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿ ಮುಂದುವರಿಯಬೇಕೋ ಅಥವಾ ಹಿಂದುತ್ವ ಸರ್ವಾಧಿಕಾರಿ ಪ್ರಭುತ್ವದ ಮಟ್ಟಕ್ಕೆ ಕುಗ್ಗಬೇಕೋ ಎನ್ನುವುದರ ನಡುವಿನ ಸ್ಪರ್ಧೆಯಾಗಿದೆ.
ಇದನ್ನೂ ಓದಿ: ರಾಯಚೂರು|ಸಂಘರ್ಷದ ದಾರಿಯಲ್ಲಿ ಮುನ್ನಡೆಯುವ ಸಂಕಲ್ಪ
ಇದು ನಮ್ಮ ಸಮ್ಮಿಶ್ರ ಸಂಸ್ಕೃತಿಯನ್ನು ಕಾಪಾಡಲು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಉಪರಾಷ್ಟ್ರಪತಿಗಳು, ಚುನಾವಣಾ ಆಯೋಗ ಮತ್ತು ರಾಜ್ಯಪಾಲರು ಮುಂತಾದ ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಮತ್ತು ಸರ್ವಾಧಿಕಾರವನ್ನು ಜಾರಿಗೊಳಿಸಲು ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಪ್ರತಿರೋಧಿಸಲು ನಡೆಸುವ ಒಂದು ಸಮರವಾಗಿದೆ.
ಉಪರಾಷ್ಟ್ರಪತಿಯನ್ನು ಚುನಾಯಿಸುವ ಎಲ್ಲಾ ಮತದಾರರು ರಾಷ್ಟ್ರದ ಹಿತಾಸಕ್ತಿಗಳನ್ನು ಎಲ್ಲಕ್ಕಿಂತ ಮೇಲಿಡಲು, ಸಂವಿಧಾನವನ್ನು ರಕ್ಷಿಸುವುದಾಗಿ ತಾವು ತೆಗೆದುಕೊಂಡ ಪ್ರಮಾಣವಚನವನ್ನು ನೆನಪಿಸಿಕೊಳ್ಳಲು ಮತ್ತು ನ್ಯಾಯಮೂರ್ತಿ ಸುದರ್ಶನ್ ರೆಡ್ಡಿಯವರ ಪರವಾಗಿ ತಮ್ಮ ಮತವನ್ನು ಚಲಾಯಿಸಲು ತಾವು ಮನವಿ ಮಾಡುವುದಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ (ಎಂ-ಎಲ್) ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಆರ್‍ಎಸ್‍ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಮತ್ತು ಎಐಎಫ್‍ಬಿ ಪ್ರಧಾನ ಕಾರ್ಯದರ್ಶಿ ಜಿ ದೇವರಾಜನ್ ಈ ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.
ಇದನ್ನೂ ನೋಡಿ: ಮೈಸೂರು ದಸರಾ ಉದ್ಘಾಟನೆ : ಬಿಜೆಪಿಯ ಧರ್ಮದ್ವೇಷಕ್ಕೆ ಸಾಹಿತಿಗಳ ಆಕ್ರೋಶ
