ಅಗರ್ತಲಾ: ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದಿದ್ದು, ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ದಾಳಿ ನಡೆದಿದೆ. ಸುಮಾರು 3-4 ವಾಹನಗಳು ಜಖಂಗೊಂಡಿದೆ ಎಂದು ವರದಿಯಾಗಿದೆ.
ತ್ರಿಪುರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಹಾಗೂ ತಂಡ ನೆನ್ನೆ(ಮಾರ್ಚ್ 10) ಸಂಜೆ ಬಿಸಲ್‍ಗಢ್‍ನ ನೇಹಲ್‍ಚಂದ್ರ ನಗರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿದೆ. ದಾಳಿಯ ಹಿನ್ನೆಲೆಯಲ್ಲಿ ಸಂಸದೀಯ ತಂಡವು ಇಂದು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮಗಳು ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನು ಓದಿ: ತ್ರಿಪುರಾದಲ್ಲಿ ಬಿಜೆಪಿಯಿಂದ ಚುನಾವಣೋತ್ತರ ಭಯೋತ್ಪಾದನೆ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ಕರೆ
ಕಾಂಗ್ರೆಸ್ ಮತ್ತು ಸಿಪಿಐ(ಎಂ) ಸಂಸದೀಯ ಪಕ್ಷದ ಸದಸ್ಯರು ಸಿಪಹಿಜಾಲಾ ಜಿಲ್ಲೆಯ ಹಿಂಸಾಚಾರ ಪೀಡಿತ ಬಿಶಾಲ್‌ಗಢಕ್ಕೆ ಹೋದಾಗ ಆಡಳಿತಾರೂಢ ಬಿಜೆಪಿ ಬೆಂಬಲಿತರು ದಾಳಿ ನಡೆಸಿದ್ದಾರೆ.
ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಕ್, ದಾಳಿಕೋರರು ತಾವು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿಸಿರುವ ಅವರು, ಪೊಲೀಸರು ಏನೂ ಮಾಡಲಿಲ್ಲ. ತ್ರಿಪುರಾದಲ್ಲಿ ಯಾವುದೇ ಕಾನೂನಿನ ನಿಯಮವಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸಂಸದೀಯ ತಂಡ ಎರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದು, ಆಡಳಿತರೂಢ ಬಿಜೆಪಿ ಬೆಂಬಲಿಗರ ದಾಳಿಯಿಂದಾಗಿ ಸಿಪಿಐ(ಎಂ) ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಜಿತೇಂದ್ರ ಚೌಧರಿ ಅವರ ನೇತೃತ್ವದಲ್ಲಿ ಬಿಸಲ್‌ಗಢ್‌ನ ನೆಹಲ್ ಚಂದ್ರ ನಗರ ಮಾರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಕೂಡ ರದ್ದಾಗಿದೆ.
ಇದನ್ನು ಓದಿ: ತ್ರಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಸಿಪಿಐಎಂಗೆ ಮತ ಹಾಕಿದ್ದಾರೆಂದು ಬಿಜೆಪಿ ಬೆಂಬಲಿಗರ ಗೂಂಡಾದಾಳಿ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), “ಸಂಸದರು ಮತ್ತು ಅವರ ಜೊತೆಗಿದ್ದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮುಖಂಡರು ತಕ್ಷಣ ಸ್ಥಳದಿಂದ ನಿರ್ಗಮಿಸಿ ದೊಡ್ಡ ದಾಳಿಯಿಂದ ಪಾರಾಗಿದ್ದೇವೆ. ಪಶ್ಚಿಮ ತ್ರಿಪುರಾದ ಮೋಹನಪುರಕ್ಕೆ ಸಂಸದೀಯ ಪಕ್ಷದ ಭೇಟಿಗೂ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ವಿಶಾಲ್‌ಗಢ್‌ನ ನೆಹಾಲ್ ಚಂದ್ರ ನಗರಕ್ಕೆ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಮತ್ತು ಮುಖಂಡರೊಂದಿಗೆ ಸಂಸದರು ಘೋಷಣೆಗಳನ್ನು ಎದುರಿಸಿದರುʼʼ ಎಂದು ತಿಳಿಸಿದೆ.
ಬಿಜೆಪಿ ಬೆಂಬಲಿಗರ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪಕ್ಷದ ನಾಯಕರ ನಿಯೋಗದ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ನಿಯೋಗದ ಜೊತೆಯಲ್ಲಿದ್ದ ಪೊಲೀಸರು ಪ್ರತಿಕ್ರಿಯಿಸಿಲ್ಲ. ಬಿಜೆಪಿ ಪ್ರಾಯೋಜಿತ ಹಿಂಸಾಚಾರಕ್ಕೆ ಜಯವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ