ಬಳ್ಳಾರಿ: ಬಳ್ಳಾರಿಯ ಪ್ರತಿಷ್ಥಿತ ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಅದೇ ಕಾಲೇಜಿನ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ.
ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದಾರೆ. ಉಪನ್ಯಾಸಕಿಗೆ ಅಶ್ಲೀಲ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಪ್ರಾಂಶುಪಾಲರ ವಿರುದ್ಧ ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಎಎಸ್‌ಎಂ ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ (59)ಅವರು ತಮಗೆ ಕಳೆದ ಹಲವು ತಿಂಗಳುಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತವಾಗಿ ಪೀಡಿಸುತ್ತಿದ್ದರು ಎಂದು ಪ್ರಾಂಶುಪಾಲರ ವಿರುದ್ಧ ವೀರಶೈವ ಸಂಘದ ಮುಖ್ಯಸ್ಥರಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಉಪನ್ಯಾಸಕಿಯಾದ ನಮಗೆ ಹೀಗಾದ್ರೆ ವಿದ್ಯಾರ್ಥಿನಿಯರ ಪರಿಸ್ಥಿತಿ ಏನು ಎಂದು ಸಂತ್ರಸ್ತೆ ಪ್ರಶ್ನಿಸಿದ್ದಾರೆ.
ಇದನ್ನು ಓದಿ : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾ ಸ್ವಾಮೀಜಿ ಬಂಧನ
ಉಪನ್ಯಾಸಕಿ ನೀಡಿದ ದೂರಿನಲ್ಲಿ ಏನಿದೆ?: ಮಹಿಳಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ಅವರ ಕ್ಯಾಬೀನ್‌ಗೆ ಸಹಿ ಮಾಡಲು ಹೋದಾಗಲೆಲ್ಲಾ ವಿನಾಕಾರಣ ಕೈಗಳನ್ನು ಮುಟ್ಟುವುದು,ಕಣ್ಣು ಸನ್ನೆ ಮಾಡುವುದು,ಪದೇ ಪದೇ ತಮ್ಮ ಚೇಂಬರ್‌ಗೆ ಕರೆಯುತ್ತಿದ್ದರು. ಮನೆಯಲ್ಲಿ ಗಂಡ ಇಲ್ಲದ ಸಮಯದಲ್ಲಿ ಕರೆ ಮಾಡಿ ನಿಮ್ಮ ಮನೆಗೆ ಬರುತ್ತೇನೆ ಎಂದು, ನಿನಗೆ ಇನ್ನೂ ಮಕ್ಕಳಾಗಿಲ್ಲ ಯಾಕೆ ಎಂದು, ನನ್ನ ಹೆಂಡತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ನೀನು ನನಗೆ ಎಲ್ಲಾದಕ್ಕೂ ಸಹಕರಿಸು ಎಂದು ಉಪನ್ಯಾಸಕಿಗೆ ಹೇಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಕಳೆದ ಮಾರ್ಚ್ 31 ರಂದು ಸುಮಾರು ಮಧ್ಯಾನ 12-15 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಾಲೇಜಿನ ಭೌತಶಾಸ್ತ್ರ ಲ್ಯಾಬ್‌ಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಪನ್ಯಾಸಕಿ ಉಲ್ಲೇಖಿಸಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿ ಕಾರ್ಯಕ್ರಮಗಳಲ್ಲಿ ನನ್ನನ್ನು ಹುಡುಕಿಕೊಂಡು ನನ್ನ ಹತ್ತಿರ ಪ್ರಾಂಶುಪಾಲರು ಬರುತ್ತಿದ್ದರು. ಕಾಮದ ದೃಷ್ಠಿಯಿಂದ ನೋಡುತ್ತಿದ್ದರು. ಸಹಕರಿಸದಿದ್ದರೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು.
ಪದೇ ಪದೇ ಪೋನ್ ಮಾಡುವುದು,ನಿನ್ನಗಂಡ ಇಲ್ಲದೆ ಇರುವ ಸಮಯ ನನಗೆ ಹೇಳು ನಾನು ಫೋನ್ ಮಾಡುತ್ತೇನೆಂದು ಐಲವ್‌ಯೂ ಅಂತ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ವ್ಯಾಟ್ಸಪ್‌ನಲ್ಲಿ ಮೇಸೆಜ್ ಮಾಡುವುದನ್ನು ಮಾಡುತ್ತಿದ್ದರು. ಸರ್ ನನಗೆ ದಯವಿಟ್ಟು ಹೀಗೆಲ್ಲಾ ನನ್ನ ಜೊತೆಗೆ ಮಾತನಾಡಬೇಡಿ, ನೀವು ನನ್ನ ತಂದೆ ಸಮಾನರು ಎಂದು ಹೇಳಿದರೂ ಲೈಂಗಿಕ ಕಿರುಕುಳ ಕೊಡುವುದಲ್ಲದೇ ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆದು ಹಾಕುತ್ತೇನೆ. ಮತ್ತು ನಿನ್ನ ಪ್ರಾಣ ತೆಗೆಯುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಇದರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದರ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದರು ಕೂಡ ಯವುದೇ ಪ್ರಯೋಜನವಾಗಿಲ್ಲ, ಆಡಳಿತ ಮಂಡಳಿ ಇದರ ಬಗ್ಗೆ ಹಾಗೂ ಪ್ರಾಂಶುಪಾಲರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದಾರೆ.
ಪ್ರಾಂಶುಪಾಲರ ಮಾತಿಗೆ ಮನನೊಂದು ಕೆಲವೊಮ್ಮೆ ಕಾಲೇಜಿಗೆ ಹೋಗದೆ ರಜೆ ತೆಗೆದುಕೊಳ್ಳುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈ ಬಗ್ಗೆ ಮಹಿಳಾ ಠಾಣೆ ಪೋಲಿಸರು ಸಂತ್ರಸ್ತೆ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 354(ಎ),504,506,509 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿದ್ದಾರೆ. ನನ್ನ ಗಮನಕ್ಕೆ ಸಂತ್ರಸ್ತೆ ಈ ವಿಷಯ ತಂದಿರಲಿಲ್ಲ. ಲೈಂಗಿಕ ದೌರ್ಜನ್ಯದ ಕುರಿತು ಪತ್ರ ಬರೆದು ಮೂರು ದಿನಗಳ ಹಿಂದೆಯಷ್ಟೇ ಕಾಲೇಜಿನ ಕಚೇರಿಗೆ ಉಪನ್ಯಾಸಕಿ ನೀಡಿದ್ದಾರೆ. ಸಂತ್ರಸ್ತೆ ಪರವಾಗಿ ನಾವಿದ್ದೇವೆ, ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ, ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳುತ್ತೇವೆಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಕ್ರಮ ಕೈಗಳ್ಳಲಾಗುವುದು ಎಂದು ಎಎಸ್‌ಎಂ ಕಾಲೇಜಿನ ಅಧ್ಯಕ್ಷೆ ಗಿರಿಜಾ ಅವರು ತಿಳಿಸಿದ್ದಾರೆ.