ರಕ್ಷಣಾ ಕಾಯ್ದೆಗೆ ಆಗ್ರಹಿಸಿ ಸುವರ್ಣಸೌಧಕ್ಕೆ ನುಗ್ಗಲೆತ್ನಿಸಿದ ವಕೀಲರು: ಬ್ಯಾರಿಕೇಡ್‌ ಕಿತ್ತೆಸೆದು ಆಕ್ರೋಶ

ಬೆಳಗಾವಿ : ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಕರ್ನಾಟಕ  ರಾಜ್ಯ ವಕೀಲರ ಪರಿಷತ್‌ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ (AILU) ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಕೀಲರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು.  ಆದರೆ ಸಚಿವರು ಸರಿಯಾಗಿ ಸ್ಪಂದಿಸದ ಕಾರಣ ರಾಷ್ಟ್ರೀಯ ಹೆದ್ದಾರಿಯಿಂದ, ಪ್ರತಿಭಟನಾ ಮೆರವಣಿಗೆ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ತಳ್ಳಾಡಿದ ಘಟನೆ ನಡೆದಿದೆ.

ಪ್ರತಿವರ್ಷ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೂ ವಕೀಲರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ 144 ಸೆಕ್ಷನ್‌ ಜಾರಿಯಾಗಿದ್ದ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಬಂದ ಸಚಿವ ಗೋವಿಂದ ಕಾರಜೋಳರನ್ನು ತರಾಟೆಗೆ ತೆಗೆದುಕೊಂಡರು. ಯುವ ವಕೀಲರ ಜೊತೆಗೆ ಮಾತಿನ ಚಕಮಕಿನಡೆಯಿತು. ನಂತರ ಕಾನೂನು ಸಚಿವ ಮಾಧುಸ್ವಾಮಿಯೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಅವರು ಬರದಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಕೇವಲ 10 ಜನ ಪದಾಧಿಕಾರಿಗಳು ಒಳಗೆ ಹೋಗಲು ಅವಕಾಶ ಮಾಡಿಕೊಡುವುದಾಗಿ ಹೇಳಿದರೂ ಕೇಳಲಿಲ್ಲ. ನಂತರ, ಬ್ಯಾರಿಕೇಡ್‌ ದಾಟಿ ಒಳನುಗ್ಗಲು ಯತ್ನಿಸಿದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿಸರ್ಕಾರ ಯುವ ವಕೀಲರಿಗೆ ವಿಶೇಷ ಪ್ಯಾಕೇಜ್‌ ಒದಗಿಸಬೇಕು: ಎಐಎಲ್‌ಯು

ಇದೇ ವೇಳೆ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.  ವಕೀಲರು ಹಾಗೂ ಪೊಲೀಸರ ಮಧ್ಯೆ ತೀವ್ರ ತಳ್ಳಾಟ ನೂಕಾಟ ನಡೆಯಿತು. ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.  ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಸರ್ವೀಸ್ ರಸ್ತೆಯನ್ನು ವಕೀಲರು ಬಂದ್‌ ಮಾಡಿದ್ದರಿಂದ  ನಾಲ್ಕು ಗಂಟೆಗೆ ಹೆಚ್ಚು ಕಾಲ  ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಸ್ಥಗಿತವಾಗಿದೆ.

ಪ್ರತಿಭಟನೆ ತೀವ್ರಗೊಳ್ಳುತ್ತಿರುವುದುದನ್ನು ಅರಿತು ಸ್ಥಳಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಪ್ರತಿಭಟನೆಕಾರರನ್ನು ಸಮಾಧಾನ ಪಡಿಸಿದರು. ವಕೀಲರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜನವರಿಯಲ್ಲಿ ಜಂಟಿ ಅಧಿವೇಶನ ನಡೆಯಲಿದ್ದು ಈ ವೇಳೆ ಸಾಧಕ ಬಾಧಕ ಚರ್ಚಿಸಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. ವಕೀಲರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ನ್ಯಾಯ ಇದೆ. ಅವರಿಗೆ ರಕ್ಷಣೆ ಕೊಡಬೇಕು ಎಂದು ನನಗೂ ಅನಿಸಿದೆ. ಈ ಕುರಿತು ಸಿಎಂ ಬೊಮ್ಮಾಯಿ‌ ಜೊತೆಗೆ ಮಾತನಾಡಿದ್ದು ಅವರಿಗೆ ರಕ್ಷಣೆ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ವಕೀಲರಿಗೆ ಕೊಲೆ ಬೆದರಿಕೆ ಆಗಲಿ, ಹಲ್ಲೆ ಆಗಲಿ‌ ಮೊದಲಾದವುಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಸಚಿವ ಅಶೋಕ್‌ ಅವರು ಭರವಸೆ ನೀಡಿದ ಬಳಿಕ ವಕೀಲರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ,  ಬಾರ್‌ ಕೌನ್ಸಿಲ್‌ ಅಧ್ಯಕ್ಷ ವಿಶಾಲ್‌ ರಘು, ಬಾರ್‌ ಕೌನ್ಸಿಲ್‌ ಸದಸ್ಯರು,   AILU ಸಂಘಟನೆಯ ದಕ್ಷಿಣ ಭಾರತ ವಲಯ ಸಂಚಾಲಕರಾದ ರಾಮಚಂದ್ರ ರೆಡ್ಡಿ,  ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್,  ರಾಜ್ಯ ಉಪಾಧ್ಯಕ್ಷರಾದ ಕೆ.ಕೋಟೇಶ್ವರ ರಾವ್,  ಶಿವಶಂಕರಪ್ಪ,  ಬೆಂಗಳೂರು ಜಿಲ್ಲಾ ಅಧ್ಯಕ್ಷ ಹರೀಂದ್ರ ರಾಜ್ಯ ಮುಖಂಡರಾದ ಆರ್.‌ ಕೆ ದೇಸಾಯಿ, ಶರಣಬಸವ ಮರದ, ಕೆ.ಕರುಣಾ ನಿಧಿ, ಬಸವರಾಜ ಕೋರಿಮಠ, ಅನ್ಷದ್‌ ಪಾಳ್ಯ, ತಿಮ್ಮೇಗೌಡ, ಸತೀಶ್‌ ಕೋಲಾರ  ಸೇರಿದಂತೆ ಅನೇಕರಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *