ನವದೆಹಲಿ: ಹಿರಿಯ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಮದ್ರಾಸ್ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದು ಅವರ ನೇಮಕಾತಿ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ. ಇಂದು(ಫೆಬ್ರವರಿ 07) ಅವರು ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಕ್ಟೋರಿಯಾ ಗೌರಿ ಅವರು ಕೆಲ ಸಮುದಾಯಗಳ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ, ಅವರ ಭಾಷಣದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು ನ್ಯಾಯಾಧೀಶರಾಗಿ ನೇಮಕದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆದರೆ, ಪ್ರಮಾಣ ವಚನ ಸ್ವೀಕಾರಕ್ಕೂ ಕೆಲವೇ ನಿಮಿಷಗಳ ಮೊದಲು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನು ಓದಿ: ಸುಪ್ರೀಂ ಕೋರ್ಟ್: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಉನ್ನತ ಸಮಿತಿ ಸಭೆಯ ವಿವರಣೆ ಕೋರಿದ್ದ ಅರ್ಜಿ ವಜಾ
ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬಿ.ಆರ್ ಗವಾಯಿ ಅವರನ್ನೊಳಗೊಂಡ ಪೀಠ ಅರ್ಜಿಯಲ್ಲಿ ಪ್ರಸ್ತಾಪಿಸಿರುವಂತೆ ಗೌರಿಯ ಅರ್ಹತೆ ಮತ್ತು ಯೋಗ್ಯತೆಗೆ ಸಂಬಂಧಿಸಿದೆ. ಇದು ವ್ಯಕ್ತಿನಿಷ್ಠ ಮೌಲ್ಯಮಾಪನವಾಗಿದ್ದು, ನ್ಯಾಯಾಲಯ ಅದನ್ನು ಪರಿಗಣಿಸುವುದಿಲ್ಲ ಎಂದಿದೆ. ಕೊಲಿಜಿಯಂನ ನಿರ್ಧಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ.
ಗೌರಿ ಅವರ ನೇಮಕ ಪ್ರಶ್ನಿಸಿ ಮದ್ರಾಸ್ ಉಚ್ಚ ನ್ಯಾಯಾಲಯದ ವಕೀಲರು ಅರ್ಜಿ ಸಲ್ಲಿಸಿದ್ದರು. ಅವರು ಬಿಜೆಪಿ ಸದಸ್ಯರಾಗಿದ್ದಾರೆ, ವಕೀಲೆಯಾಗಿ ಬಿಜೆಪಿಯ ಪರ ಕೆಲಸವೂ ಮಾಡಿದ್ದಾರೆ. ಸಮುದಾಯವೊಂದರ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿರುವ ಹಿನ್ನೆಲೆ ಅವರ ನೇಮಕವನ್ನು ತಡೆ ಹಿಡಿಯಬೇಕು ಎಂದು ಕೋರಲಾಗಿತ್ತು.
ಇದನ್ನು ಓದಿ: “ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಮತೋಲಿತ ಪ್ರಾತಿನಿಧ್ಯ” – ವೈರಲ್ ಆಗುತ್ತಿದೆ ಕೇರಳ ಸಂಸದನ ಭಾಷಣ
ಬೆಳಗ್ಗೆ 10.25ರ ಸುಮಾರಿಗೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ, ಗೌರಿ ಅವರ ವಿರುದ್ಧದ ಆರೋಪವನ್ನು ಕೈಬಿಟ್ಟಿತು ಮತ್ತು ಅರ್ಜಿಯನ್ನು ವಜಾಗೊಳಿಸಿತು. ನ್ಯಾಯಾಲಯದ ಆದೇಶ ಬಂದ 5 ನಿಮಿಷಗಳ ಬಳಿಕ ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ 10.30ಕ್ಕೆ ವಿಕ್ಟೋರಿಯಾ ಗೌರಿ ಅವರು, ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮದ್ರಾಸ್ ಉಚ್ಚ ನ್ಯಾಯಾಲಯದ ಬಾರ್ ಕೌನ್ಸಿಲ್ ಸದಸ್ಯರು ಸಲ್ಲಿಸಿದ ಅರ್ಜಿಯನ್ನು ಫೆಬ್ರವರಿ 10 ರಂದು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಒಪ್ಪಿಕೊಂಡಿತ್ತು. ಆದರೆ, ತುರ್ತು ವಿಚಾರಣೆ ನಡೆಸಲು ಎರಡನೇ ಬಾರಿಗೆ ಕೋರಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಇಂದು ವಿಚಾರಣೆ ನಿಗದಿಪಡಿಸಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ