ರಾಣೇಬೆನ್ನೂರ:ಕಾನೂನು ಪದವಿ ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಲು ಒತ್ತಾಯಿಸಿ, ಭಾರತೀಯ ಕರಾರು ಅಧಿನಿಯಮ1872 ಭಾಗ -1 ಮರು ಪರೀಕ್ಷೆಯ ಫಲಿತಾಂಶ ಕೂಡಲೇ ಬಿಡುಗಡೆ ಮಾಡಲು ಸೇರಿದಂತೆ ಕಾನೂನು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪರಿಹರಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಕಾನೂನು ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ ಹುಬ್ಬಳ್ಳಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಅವರಿಗೆ ಆರ್.ಟಿ.ಇ.ಎಸ್ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲರಾದ ಬಿ.ರಮೇಶ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು. ಕಾನೂನು
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಮೂರು ವರ್ಷದ ಕಾನೂನು ಪದವಿ ವಿಷಯಗಳಲ್ಲಿ 1 ನೇ ಸೆಮಿಸ್ಟರ್ ಭಾರತೀಯ ಕರಾರು ಅಧಿನಿಯಮ1872 ಭಾಗ -1 ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಬೇಕು. ಏಕೆಂದರೆ ಈ ಹಿಂದೆ ಕಳೆದ 23 ಜನವರಿ 2025 ರಂದು ಪರೀಕ್ಷೆ ನಡೆದಿದ್ದು. ಯಾವುದೋ ಒಂದು ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ನಕಲು ಮಾಡಿರುವದರಿಂದ ನ್ಯಾಯಾಲಯ ಮರುಪರೀಕ್ಷೆ ನಡೆಸಲು ಆದೇಶಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಿ, ಈ ವಿಚಾರದಲ್ಲಿ ಕಟ್ಟುನಿಟ್ಟಾದ ಕ್ರಮತೆಗೆದುಕೊಳ್ಳಬೇಕು. ಪ್ರಶ್ನೆ ಪತ್ರಿಕೆ ನಕಲು ಮಾಡಿದ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಕಾಡುವ ಬೆಟ್ಟಗುಡ್ಡಗಳು ಕಾನೂನು
ಬಹುತೇಕ ಪರೀಕ್ಷೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಇದ್ದು, ಅಧಿಕಾರಿಗಳು ಹಣದ ಆಸೆಗೆ ಒಳಗಾಗಿ ಪ್ರಶ್ನೆ ಪತ್ರಿಕೆ ನಕಲು ಮಾಡಿರುವುದು ನಾಚಿಕೆಗೆಡಿನ ಸಂಗತಿ. ಈ ಪ್ರಕರಣ ಬೆಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ವಿಶ್ವವಿದ್ಯಾಲಯದ ನಿಯಮಗಳಿಗೆ ಕಟ್ಟಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಯಾರೋ ಮಾಡಿದ ತಪ್ಪಿಗೆ ನ್ಯಾಯಯುತವಾಗಿ ಪರೀಕ್ಷೆ ಬರೆದ ಬಹುತೇಕ ಅಮಾಯಕ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗಲಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಆಗಿದೆ ಕಾನೂನು ವಿದ್ಯಾರ್ಥಿಗಳು ಜೀವನ. ಆದರಿಂದ ಈ ಬಾರಿ 21 ಮೇ 2025 ರಂದು ಮರು ಪರೀಕ್ಷೆ ಬರೆಯುತ್ತಿರುವ ನೂರಾರು ವಿದ್ಯಾರ್ಥಿಗಳ ಕಾನೂನು ಶಿಕ್ಷಣಕ್ಕೆ ಯಾವುದೇ ತೊಂದರೆ, ಅಡಚಣೆ ಆಗದಂತೆ ತಡೆಯಬೇಕು, ಕೂಡಲೇ ಫಲಿತಾಂಶ ಬಿಡುಗಡೆ ಮಾಡಬೇಕು, ಮರುಮೌಲ್ಯಮಾಪನಕ್ಕೆ ಅವಕಾಶ ಕೊಡಬೇಕು, ಮರುಮೌಲ್ಯಮಾಪನಕ್ಕೆ ಶುಲ್ಕದಿಂದ ವಿನಾಯಿತಿ ನೀಡಬೇಕು. ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಸಮ ಸೆಮಿಸ್ಟರ್ ಪರೀಕ್ಷೆ ಸಮಯದಲ್ಲಿ ಮತ್ತೊಮ್ಮೆ ಯಾವುದೇ ಶುಲ್ಕ ವಿಧಿಸದಂತೆ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿದ್ಯಾರ್ಥಿಗಳ ಇನ್ನೂ ವಿವಿಧ ಬೇಡಿಕೆಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮುಂದಾಗಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದುರುಗಪ್ಪ ನಪೂರಿ, ಸುನೀಲ್ ಕುರುಬರ, ಹನುಮಂತ ಹರಿಜನ, ಕಾಂತೇಶ್ ಮಠದ, ಅಜೇಯ್ ಕೊಡ್ಲೆರ್, ಕಿರಣ ತುಮ್ಮಿನಕಟ್ಟಿ, ಅರುಣ್ ಹೆಚ್, ರಾಹುಲ್ ಮಡಿವಾಳರ, ಪ್ರಸನ್ನಗೌಡ ಹಲಸೂರ, ಬಸವರಾಜ ಹಾವೇರಿ,ಆಸಂಗಿ ವಡ್ಡರ, ಅರುಣ್ ಕುಮಾರ್ ತಿಪ್ಪಣ್ಣನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03 ಕಾನೂನು