ಲಸಿಕೆಯಿಂದ ಅಡ್ಡಪರಿಣಾಮ : ಹೆಚ್ಚಿದ ಆತಂಕ

ದೆಹಲಿ ಜ 18 : ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ  ಚಾಲನೆ ನೀಡಲಾಗಿದೆ. ಕೆಲವೆಡೆ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾದ ವರದಿ ಪ್ರಕಟವಾಗುತ್ತಿದೆ. ಈ ನಡುವೆ ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಮೊದಲ ದಿನ ಕೋವಿಡ್-19 ಲಸಿಕೆ ಚುಚ್ಚುಮದ್ದನ್ನು ಪಡೆದ ಆರೋಗ್ಯ ಕಾರ್ಯಕರ್ತರ ಪೈಕಿ 5 ‘ತೀವ್ರ’ ಹಾಗೂ 60 ‘ಕಡಿಮೆ ತೀವ್ರತೆ’ಯ ಅಡ್ಡಪರಿಣಾಮ (ಎಇಎಫ್‌ಐ) ಉಂಟಾಗಿರುವ ಪ್ರಕರಣ ವರದಿಯಾಗಿದೆ.  ಉತ್ತರ ಪ್ರದೇಶದಲ್ಲಿ ಲಸಿಕೆ ಪಡೆದ ನಂತರ 46 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಲಸಿಕೆ ಆರಂಭದ ದಿನವೇ ಅಪಸ್ವರವೂ ಕೇಳಿಬಂದಿತ್ತು, ದಿಲ್ಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆ ವೈದ್ಯರು “ನಮಗೆ ಕೊವ್ಯಾಕ್ಸಿನ್‌ ಬೇಡ. ಕೊವಿಶೀಲ್ಡ್ ಕೊಡಿ’ ಎಂಬ ಬೇಡಿಕೆಯ ಪತ್ರವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದರು “ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಇನ್ನೂ ಪ್ರಯೋಗ ಹಂತದಲ್ಲಿದೆ. ಟ್ರಯಲ್‌ ವೇಳೆ ಇದನ್ನು ಸಾಕಷ್ಟು ಸಂಖ್ಯೆಯ ಪ್ರತಿನಿಧಿಗಳಿಗೆ ನೀಡಿಲ್ಲ. ಹೀಗಾಗಿ ಕೊವಿಶೀಲ್ಡನ್ನೇ ನಮಗೆ ನೀಡಿ’ ಎಂದು ಮನವಿ ಮಾಡಿದ್ದರು. ಇವರ ಮನವಿಯನ್ನು ಪರಿಗಣೆನೆಗೆ ತೆಗೆದುಕೊಳ್ಳದೆ ಕೊವಿಶೀಲ್ಡ್ ನೀಡಿದಾಗ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದರು.

 

ಉತ್ತರ ಪ್ರದೇಶದಲ್ಲಿ ಒಂದು ಸಾವು :  ಕೊರೊನಾ ಲಸಿಕೆ ಪಡೆದ ಒಂದು ದಿನದ ಬೆನ್ನಲ್ಲೇ 46 ವರ್ಷದ ಸರಕಾರಿ ಆಸ್ಪತ್ರೆಯ ನೌಕರ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಲಸಿಕೆಯಿಂದ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಹಿಪಾಲ್ ಸಿಂಗ್ ಉಸಿರಾಟದ ಸಮಸ್ಯೆ ಮತ್ತು ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಲಸಿಕೆ ಪಡೆಯುವ ಮುನ್ನವೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಶನಿವಾರ ಮಧ್ಯಾಹ್ನದ ನಂತರ ಮಹಿಪಾಲ್ ಸಿಂಗ್ ಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಭಾನುವಾರ ಅವರಿಗೆ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮೃತನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಲಸಿಕೆಯ ಅಡ್ಡ ಪರಿಣಾಮದ ಸೂಚನೆಗಳು ಕಂಡು ಬಂದಿಲ್ಲ ಎಂದು ಜಿಲ್ಲಾಸ್ಪತ್ರೆಯ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಗಂಭೀರ ಅಡ್ಡಪರಿಣಾಮವೇನಾದರೂ ಉಂಟಾದರೆ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭಾರತ್‌ ಬಯೋಟೆಕ್‌ ಶನಿವಾರ ಘೋಷಿಸಿದೆ. ಪ್ರತಿಕೂಲ ಪರಿಣಾಮ ಕುರಿತು 7 ದಿನಗಳ ಒಳಗಾಗಿ ಮಾಹಿತಿ ನೀಡಲೆಂದು ಅರ್ಜಿಯೊಂದನ್ನೂ ನೀಡಿರುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *