ಲಸಿಕೆಯ ಬೆಲೆ ನಿರ್ಧಾರ ಮತ್ತು ಹಂಚಿಕೆಯನ್ನು ತಯಾರಕರಿಗೆ ಬಿಡಬೇಡಿ – ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋರ್ಟ್ ಸಲಹೆ ಮತ್ತು ಹಲವು ಪ್ರಶ್ನೆಗಳು

ದೇಶದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಅದರ ಲಸಿಕೆ ಧೋರಣೆಯ ಬಗ್ಗೆ ಹಲವಾರು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದೆ.

ಮಹಾಸೋಂಕಿನ ಗಹನ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಉತ್ಪಾದನೆಯಾಗುತ್ತಿರುವ ಎಲ್ಲ ಲಸಿಕೆ ಡೋಸುಗಳನ್ನು ಖರೀದಿಸುತ್ತಿಲ್ಲವೇಕೆ? ರಾಜ್ಯಗಳಿಗೆ ಸಮಭಾವದಿಂದ ಡೋಸುಗಳ ಹಂಚಿಕೆ ಮಾಡಲು ಸಾಧ್ಯವಿರುವುದು ಕೇಂದ್ರ ಸರಕಾರಕ್ಕೇ ತಾನೇ? ಎಂದು ಮಹಾಸೋಂಕಿಗೆ ಸರಕಾರದ ಸ್ಪಂದನೆಯನ್ನು ಕುರಿತಂತೆ ಸುಪ್ರಿಂ ಕೋರ್ಟ್ ಪ್ರಶ್ನಿಸಿದೆ.

“ಲಸಿಕೆಯ ಬೆಲೆ ನಿರ್ಧಾರ ಮತ್ತು ಹಂಚಿಕೆಯನ್ನು ತಯಾರಕರಿಗೆ ಬಿಡಬೇಡಿ. ನೀವು ಸಾರ್ವಜನಿಕ ಹಿತದೃಷ್ಟಿಯಿಂದ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ ಮತ್ತು ನಿಮ್ಮ ಅಧಿಕಾರವನ್ನು ಚಲಾಯಿಸಬೇಕಾಗಿದೆ” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸರಕಾರದ ಪರ ವಾದಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತರವರಿಗೆ ಹೇಳಿದರು ಎಂದು ವರದಿಯಾಗಿದೆ (ದಿ ಲೀಫ್‌ಲೆಟ್.ಇನ್, ಎಪ್ರಿಲ್ 30)

ಇದನ್ನು ಓದಿ: ಮೌಖಿಕ ಹೇಳಿಕೆಯ ಸುದ್ದಿ: ಚುನಾವಣಾ ಆಯೋಗದ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ನ್ಯಾಯ ಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರಿರುವ ಸುಪ್ರಿಂ ಕೋರ್ಟಿನ ಈ ಪೀಠ ನ್ಯಾಯಾಲಯ ತಾನಾಗಿಯೇ ಎತಿಕೊಂಡ ಕೊವಿಡ್ ಸಂದರ್ಭದ ಪ್ರಶ್ನೆಗಳ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ ಈ ಪ್ರಶ್ನೆಗಳನ್ನು ಕೇಳಿದೆ ಮತ್ತು ಸೂಚನೆಯನ್ನು ನೀಡಿದೆ.

ಆಸ್ಟ್ರ ಜೆನೆಕ ಅಮೆರಿಕನ್ ನಾಗರಿಕರಿಗೆ ಇಲ್ಲಿಗಿಂತ ಬಹಳ ಕಮ್ಮಿ ಬೆಲೆಯಲ್ಲಿ ಲಸಿಕೆಯನ್ನು ಒದಗಿಸುತ್ತಿದೆ. ಹೀಗಿರುವಾಗ ನಾವೇಕೆ ಹೆಚ್ಚು ತೆರಬೇಕು? ತಯಾರಕರು ನಿಮಗೆ 150 ರೂ. ನಲ್ಲಿ ಕೊಡುತ್ತಾರೆ, ಆದರೆ ರಾಜ್ಯಗಳಿಗೆ 300ರೂ. ಅಥವ 400ರೂ. ನಾವು ಒಂದು ದೇಶವಾಗಿ ಏಕೆ ಇದನ್ನು ತೆರಬೇಕು? ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಪ್ರಶ್ನಿಸಿದರು.

ಬೆಲೆ ನಿಗದಿ ಪ್ರಶ್ನೆ ಬಹಳ ಗಂಭೀರವಾದದ್ದು ಎಂದ ನ್ಯಾಯ ಮೂರ್ತಿ ಚಂದ್ರಚೂಡ್ “ಬಹುದೊಡ್ಡ ವಿಭಾಗ ಬಡವರು ಮತ್ತು ಅಂಚಿಗೊತ್ತಲ್ಪಟ್ಟವರು, ನಾವು ಒಂದು ಖಾಸಗೀ ವಲಯ ನಮೂನೆಯನ್ನು ಹೊಂದಲು ಸಾಧ್ಯವಿಲ್ಲ. ನಾವು ರಾಷ್ಟ್ರೀಯ ರೋಗ ನಿರೋಧ ಅಭಿಯಾನ ಮಾದರಿಯನ್ನು ಅನುಸರಿಸಬೇಕು” ಎಂದರು.

ಇದನ್ನು ಓದಿ: ರಾಜ್ಯಪಾಲರ ಹುದ್ದೆಗೆ ಲಂಚ-ನ್ಯಾಯಾಧೀಶರ ಘನತೆಗೆ ಧಕ್ಕೆ: ಹೈಕೋರ್ಟ್‌

ಪ್ರಸಕ್ತ ಲಸಿಕೆ ಬೆಲೆಗಳು ಕೇಂದ್ರ ಸರಕಾರ ಉತ್ಪಾದನೆಗೆ, ಮೂಲರಚನೆಗೆ ಮತ್ತು ಇತರ ಸಹಾಯಗಳಿಗೆ ಕೊಟ್ಟಿರುವ ನಿಧಿಗಳನ್ನು ಲೆಕ್ಕಕ್ಕೆ ತಗೊಂಡಿದೆಯೇ? ಸರಕಾರ ಲಸಿಕೆಗಳ ಸಂಶೋಧನೆ, ಅಭಿವೃದ್ಧಿ ಮತ್ತು ತಯಾರಿಕೆಗೆ ಕೊಟ್ಟಿರುವ ನೇರ ಮತ್ತು ಪರೋಕ್ಷ ಅನುದಾನ/ನೆರವಿನ ಪೂರ್ಣ ವಿವರವನ್ನು ಸೂಚಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವೇ ಎಂದೂ ಸುಪ್ರಿಂ ಕೋರ್ಟ್ ಪೀಠ ಕೇಳಿತು.

ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ಮತ್ತು 100ರ ಅಡಿಯಲ್ಲಿನ ಅಧಿಕಾರಗಳನ್ನು ಏಕೆ ಬಳಸಿಕೊಳ್ಳಬಾರದು?

ಪೇಟೆಂಟ್ ಕಾಯ್ದೆಯ ವಿಭಾಗ 100ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಸರಕಾರೀ ಉದ್ದೇಶಗಳಿಗೆ ಪೇಟೆಂಟ್‌ಗಳನ್ನು ಬಳಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡಬಾರದೇಕೆ ಅಥವ ಪೇಟೆಂಟ್ಸ್ ಕಾಯ್ದೆಯ ವಿಭಾಗ 92 ರ ಅಡಿಯಲ್ಲಿ ರೆಮ್ಡೆಸಿವಿರ್, ಫೆಸಿಪುರವಿರ ಮತ್ತು ಟೊಸಿಲಿಝುಮಬ್ ನಂತಹ ಔಷಧಿಗಳನ್ನು ಕಡ್ಡಾಯ ಪರವಾನಿಗೆಗೆ ಅಧಿಸೂಚಿಸಬಾರದೇಕೆ, ವಿಶೇಷವಾಗಿ, ಇಂತಹ ನಿರ್ದೇಶನ ಜೆನೆರಿಕ್ ಔಷಧಿಗಳ ತಯಾರಕರು ಕಾನೂನಿನ ಕ್ರಮದ ಭಯವಿಲ್ಲದೆ ಇವನ್ನು ತಯಾರಿಸಲು ಅನುವು ಮಾಡಿಕೊಡುವಾಗ?- ಇದು ನ್ಯಾಯಮೂರ್ತಿ ಚಂದ್ರಚೂಡ್ ಮುಂದುವರೆದು ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ.

ರಾಜ್ಯಗಳಿಗೆ ಲಸಿಕೆಗಳ ಪೂರೈಕೆಯ ಬಗ್ಗೆ ನ್ಯಾಯಪೀಠ ಹಲವು ಪ್ರಶ್ನೆಗಳನ್ನು ಕೇಂದ್ರ ಸರಕಾರಕ್ಕೆ ಕೇಳಿತು.

  • ಕೇಂದ್ರದಿಂದ ಖರೀದಿಸುವ 50% ಡೋಸುಗಳನ್ನು ರಾಜ್ಯಕ್ಕೆ ವಿತರಿಸುವುದುನ್ನು ಯಾವಾಗ ತಿಳಿಸುತ್ತೀರಿ, ಮತ್ತು ಕೇಂದ್ರ ಸರಕಾರ ಖರೀದಿಗೆ, ಮತ್ತು ರಾಜ್ಯಸರಕಾರಗಳ ಖರೀದಿಗೆ ಭಿನ್ನ ಬೆಲೆನಿಗದಿಗೆ ತರ್ಕಾಧಾರವೇನು ?
  • ಪ್ರಸ್ತುತ ಮತ್ತು ಮುಂದಿನ ಆರು ತಿಂಗಳುಗಳಲ್ಲಿ ಲಸಿಕೆ ದಾಸ್ತಾನುಗಳ ಲಭ್ಯತೆಯನ್ನು ಮತ್ತು ಲಸಿಕೀಕರಣದ ಯೋಜನೆಗಳನ್ನು ಸೂಚಿಸಲು ಕೇಂದ್ರ ಮತ್ತು ರಾಜ್ಯಕ್ಕೆ ಸಾಧ್ಯವೇ, ಬೇರೆ ಬೇರೆ ರಾಜ್ಯಗಳಲ್ಲಿ ಲಸಿಕೆ ಅಡಳಿತದಲ್ಲಿ ಗೊಂದಲವನ್ನು ತಪ್ಪಿಸಲು ಕೊವಿನ್ ವೆಬ್‌ತಾಣದ ಮೂಲಕ ಸತತ ಪಾರದರ್ಶಕತೆ ಪ್ರಯತ್ನವನ್ನು ಮಾಡಬಹುದೇ?
  • ಸದ್ಯ ಇರುವ ಎರಡು ಲಸಿಕಾ ತಯಾರಕರು, ಸೀರಂ ಇನ್ಸ್ಟಿಟ್ಯುಟ್ ಮತ್ತು ಭಾರತ್ ಬಯೊಟೆಕ್ ರಾಜ್ಯಗಳಿಗೆ ಲಸಿಕೆಗಳನ್ನು ಹಂಚುವಾಗ ಸಮಭಾವವನ್ನು ಪ್ರದರ್ಶಿಸಬೇಕೇ? ಅಥವ ಒಂದು ರಾಜ್ಯ ಲಸಿಕೆ ಪಡೆಯುವಲ್ಲಿ ಆದ್ಯತೆಯನ್ನು ಪಡೆಯುತ್ತದೆ, ಅದರಿಂದಾಗಿ ಬಹುಪಾಲು ಲಸಿಕೆಗಳನ್ನು ಪಡೆಯುತ್ತದೆ. ಉಳಿದ ರಾಜ್ಯಗಳು ಕಾಯಬೇಕು ಎಂಬ ಪರಿಸ್ಥಿತಿ ಉಂಟಾಗುತ್ತದೆಯೇ? ಲಸಿಕೆ ವಿತರಣೆಗೆ ಜನಸಂಖ್ಯೆ, ಸೋಂಕು ದರ, ಮತ್ತು ಪರಿಣಾಮಕಾರಿ ಲಸಿಕೆ ನಿರ್ವಹಣೆಯ ಆಧಾರದಲ್ಲಿ ತನ್ನ ವಿತರಣಾ ಆಧಾರವನ್ನು ಖಾತ್ರಿಗೊಳಿಸಲು ಮತ್ತು ಇದರ ಮೇಲೆ ನಿಗಾ ಇಡಲು ಕೇಂದ್ರಕ್ಕೆ ಸಾಧ್ಯವೇ?

ಇದನ್ನು ಓದಿ: ವಿಫಲಗೊಂಡಿರುವ ‘ವಿಶ್ವ ಗುರು’

ಸುಪ್ರಿಂ ಕೋರ್ಟ್ ಪೀಠ ಲಸಿಕೆಗಳ ಕೊರತೆಯ ಪ್ರಶ್ನೆಯನ್ನೂ, ಅದರಲ್ಲೂ 45 ವರ್ಷಕ್ಕಿಂತ ಮೇಲಿನವರರಿಗೂ ಸಿಗದಿರುವ ವಿಷಯವನ್ನು ಎತ್ತಿಕೊಂಡಿತು.

ಸರಕಾರ ಯಾವಾಗ ಲಸಿಕೆ ಲಭ್ಯತೆಯ ಬಗ್ಗೆ ಸ್ಪಷೀಕರಣ ನೀಡಬೇಕೆಂದಿದೆ, ನಾಗರಿಕರು ನೇರವಾಗಿ ಹೋಗಿ ಲಸಿಕೆ ಪಡೆಯಬಹುದೇ ಎಂದು ಪೀಠ ಕೇಳಿತು.

18-44 ವಯೋಗುಂಪಿನ ರಾಜ್ಯವಾರು ಪ್ರಮಾಣಕ್ಕೆ ಅನುಸಾರವಾಗಿ ಲಸಿಕೆ ವಿತರಣೆಯ ವಿವರಗಳ ಬಗ್ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಲು ಸಾಧ್ಯವೇ ಎಂದೂ ಪೀಠ ಪ್ರಶ್ನಿಸಿತು.

ಅನಕ್ಷರಸ್ಥರು ಮತ್ತು ಇಂಟರ್ನೆಟ್ ಸೌಲಭ್ಯ್ಯ ಇಲ್ಲದವರು ಲಸಿಕೆಗೆ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಏನು ಮಾಡಬೇಕೆಂದಿವೆ ಎಂಬುದು ಸುಪ್ರಿಂ ಕೋರ್ಟ್ ಪೀಠ ಕೇಳಿದ ಮತ್ತೊಂದು ಪ್ರಶ್ನೆ.

ಲಸಿಕೆಯ ಮೊದಲ ಘಟ್ಟದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ ಸಂದರ್ಭದಲ್ಲಿ ಬಿಟ್ಟು ಹೋದ ಸ್ಮಶಾನ ಕೆಲಸಗಾರರು ಮತ್ತು ಇತರ ಸಂಯೋಜಕ ಗುಂಪುಗಳಿಗೆ ಲಸಿಕೆ ಹಾಕುವ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಿಸಿವೆಯೇ ಎಂದೂ ಸುಪ್ರಿಂ ಕೋರ್ಟ್ ಕೇಳಿತು.

ಇದನ್ನು ಓದಿ: ಲಸಿಕೆ! ಲಸಿಕೆ!! ಲಸಿಕೆ!!!

ಈ ವಿಷಯಗಳ ಕುರಿತು ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಇಟ್ಟುಕೊಂಡಿರುವ ಸುಪ್ರಿಂ ಕೋರ್ಟ್ ಪೀಠ , ಆ ಹೊತ್ತಿಗೆ ಕೇಂದ್ರ ಸರಕಾರ ಈ ಎಲ್ಲ ವಿಷಯಗಳನ್ನು ಗಮನಕ್ಕೆ ತಗೊಂಡು ತನ್ನ ಧೋರಣೆಯ ಬಗ್ಗೆ ಪುನರಾಲೋಚನೆ ಮಾಡಬಹುದು ಎಂದೂ ಸೂಚಿಸಿತು.

ಎಪ್ರಿಲ್ 22 ರಂದು ಈಗ ನಿವೃತ್ತರಾಗಿರುವ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆಯವರ ನೇತೃತ್ವದ ಪೀಠ ಆಕ್ಸಿಜನ್ ಪೂರೈಕೆ, ಅಗತ್ಯ ಔಷಧಿಗಳ ಲಭ್ಯತೆ, ಲಸಿಕೆ ಹಾಕಿಸುವ ವಿಧಾನ ಮುಂತಾದ ಪ್ರಶ್ನೆಗಳನ್ನು ತಾನಾಗಿಯೇ ಎತ್ತಿಕೊಂಡು ಕೇಂದ್ರ ಸರಕಾರಕ್ಕೆ ಈ ಕುರಿತು ನೋಟೀಸು ಕೊಟ್ಟಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದಕ್ಕೆ ಮೊದಲು ದಿಲ್ಲಿ, ಮುಂಬೈ, ಅಲಹಾಬಾದ್ ಸೇರಿದಂತೆ ಆರು ಹೈಕೋರ್ಟ್‍ ಗಳು ಆಯಾಯ ರಾಜ್ಯಗಳಲ್ಲಿ ಕೊವಿಡ್ ಎರಡನೇ ಅಲೆಯನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, “ಇದು ಗೊಂದಲವನ್ನು ಸೃಷ್ಟಿಸುತ್ತಿದ್ದು, ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುವುದರಿಂದ” ಇದನ್ನು ತಾನೇ ಎತ್ತಿಕೊಳ್ಳುವದಾಗಿ ಸುಪ್ರಿಂ ಕೋರ್ಟ್ ಹೇಳಿತು. ಆದರೆ ಇದು ವಾಸ್ತವವಾಗಿ ಬಿಜೆಪಿ ರಾಜ್ಯ ಸರಕಾರಗಳ ಬಗ್ಗೆ ಟೀಕೆಗಳಾಗುವುದನ್ನು ತಪ್ಪಿಸುವ ಒಂದು ಪರೋಕ್ಷ ಪ್ರಯತ್ನ ಎಂದು ದೇಶದ ಹಲವು ನ್ಯಾಯವಿದರು ಟೀಕೆ-ಟಿಪ್ಪಣಿ ಮಾಡಿದರು. ಇದರಿಂದಾಗಿ ನ್ಯಾಯಮೂರ್ತಿ ಬೊಬ್ಡೆಯವರು ಈ ಕೇಸಿನಲ್ಲಿ ನ್ಯಾಯಾಲಯಕ್ಕೆ ಸಲಹೆಗಾರರಾಗಿ (ಎಮಿಕಸ್ ಕ್ಯುರಿಯ) ನೇಮಿಸಿದ ಹರೀಶ್ ಸಾಳ್ವೆಯವರು ತಾನು ಈ ಕೆಲಸವನ್ನು ಮಾಡಲಾರೆ ಎಂದರು.

ನ್ಯಾಯಮೂರ್ತಿ ಬೊಬ್ಡೆಯವರ ನಿವೃತ್ತಿಯ ನಂತರ ಪೀಠದ ನೇತೃತ್ವವನ್ನು ನ್ಯಾಯಮೂರ್ತಿ ಚಂದ್ರಚೂಡ್ ವಹಿಸಿದ್ದಾರೆ. ಈ ಹೊಸ ಪೀಠ ಈ ಪ್ರಶ್ನೆಗಳನ್ನು ಎತ್ತಿಕೊಂಡಿರುವುದು ವಿವಿಧ ಹೈಕೋರ್ಟುಗಳಲ್ಲಿ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯನ್ನು ಬದಿಗೊತ್ತಲು ಅಲ್ಲ ಎಂದು ಎಪ್ರಿಲ್ 27ರಂದು ಸ್ಪಷ್ಟೀಕರಣ ನೀಡಿತು. ಹಾಗೂ ಹರೀಶ ಸಾಳ್ವೆಯವರ ಬದಲಿಗೆ ಹಿರಿಯ ಸುಪ್ರಿಂ ಕೋರ್ಟ್ ವಕೀಲರಾದ ಜಯದೀಪ್ ಗುಪ್ತ ಮತ್ತು ಮೀನಾಕಶಿ ಅರೋರಾ ಅವರುಗಳನ್ನು ನ್ಯಾಯಾಲಯದ ಸಲಹೆಗಾರರಾಗಿ ನೇಮಿಸಲಾಗಿದೆ.

ಕೊವಿಡ್‍ ಕಾಲದಲ್ಲಿ ಖಾಸಗಿ ಔಷಧಿ ಕಂಪನಿಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು
ವ್ಯಂಗ್ಯಚಿತ್ರ: ಸುಭಾನಿ, ಡಕ್ಕನ್‍ ಕ್ರಾನಿಕಲ್

Donate Janashakthi Media

Leave a Reply

Your email address will not be published. Required fields are marked *