ಲಸಿಕೆ ನೀಡಲು ನಿಗದಿಯಾದ ಕಾಲಮಿತಿ ವಿವರ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲಾ ಜನತೆಗೆ ಕೋವಿಡ್‌ ಲಸಿಕೆಯನ್ನು ಯಾವ ಕಾಲಮಿತಿಯೊಳಗೆ ನೀಡಲು ಯೋಜನೆ ರೂಪಿಸಿಕೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಾಲಯದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ನ್ಯಾಯಪೀಠ ಈ ನಿರ್ದೇಶನವನ್ನು ನೀಡಿದೆ. ಈ ವೇಳೆ ರಾಜ್ಯ ಸರಕಾರದ ಪರ ವಕೀಲರು ಲಸಿಕೆ ಕೊರತೆಯಾಗುವುದಿಲ್ಲ ಎಂದು ತಿಳಿಸಿ ಪ್ರಮಾಣ ಪತ್ರ ಸಲ್ಲಿಸಿದರು.

ಸೋಂಕಿನ ಪ್ರಕರಣಗಳು ತಗ್ಗುತ್ತಿವೆ. ಜತೆಗೆ ಲಸಿಕೆ ನೀಡುವುದನ್ನು ತೀವ್ರಗೊಳಿಸಬೇಕು. ರಾಜ್ಯದ ಎಲ್ಲ ಜನರಿಗೆ ಲಸಿಕೆಯನ್ನು ನೀಡಲು ಕಾಲಮಿತಿಯ ಯೋಜನೆ ಹಾಕಿಕೊಂಡಿದ್ದರೆ ಆ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ವಿವರ ನೀಡಿ ಎಂದು ನ್ಯಾಯಪೀಠ ಸರ್ಕಾರಕ್ಕೆ ತಿಳಿಸಿದೆ.

ಈಗಾಗಲೇ ಕಾಲೇಜುಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ವಿಶೇಷ ಲಸಿಕಾ ಶಿಬಿರಗಳನ್ನು ನಡೆಸಲಾಗುತ್ತಿದೆಯೇ ಎಂಬ ಬಗ್ಗೆಯೂ ವರದಿ ನೀಡುವಂತೆ ಕೇಳಿರುವ ನ್ಯಾಯಲಯವು ಈ ಹಿಂದೆ ಪೀಠ ನೀಡಿರುವ ಆದೇಶದಂತೆ ಮೂರನೇ ಸಂಭಾವ್ಯ ಅಲೆ ತಡೆಯಲು ಕೈಗೊಂಡಿರುವ ಕ್ರಿಯಾ ಯೋಜನೆಯ ಮಾಹಿತಿಯನ್ನು ನೀಡಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 10ಕ್ಕೆ ನಿಗದಿಯಾಗಿದೆ.

ಕೊವಿಡ್-19 ಪ್ರಕರಣಗಳ ವಿವರ ಪ್ರಕಾರ ಬುಧವಾರದ ಅಂತ್ಯದ ಅಂಕಿ-ಅಂಶಗಳಂತೆ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,99,195 ಆಗಿದೆ. ಒಟ್ಟು 28,40,147 ಸೋಂಕಿತರು ಗುಣಮುಖರಾಗಿದ್ದು. 22,569 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *