2022-23 ರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಬ್ಯಾಂಕ್ ಸಾಲ ಮನ್ನಾಗಳು ದೊಡ್ಡ ಕಾರ್ಪೊರೇಟ್‍ಗಳದ್ದು, 2012-13ರಿಂದ 15 ಲಕ್ಷ ಕೋಟಿ ರೂ.ಗೂ ಹೆಚ್ಚು ಬ್ಯಾಂಕ್‍ ಸಾಲ ರೈಟ್‍-ಆಫ್

2022-23ರ ಹಣಕಾಸು ವರ್ಷದಲ್ಲಿ, ವಾಣಿಜ್ಯ ಬ್ಯಾಂಕ್‌ಗಳು ರೂ 2.09 ಲಕ್ಷ ಕೋಟಿ ಮೌಲ್ಯದ  ಮರುಪಾವತಿಯಾಗುವ ನಿರೀಕ್ಷೆಯಿಲ್ಲದ ಸಾಲಗಳನ್ನು ರೈಟ್‍-ಆಫ್‍ ಮಾಡಿವೆ, ಅಂದರೆ ತಮ್ಮ ಲೆಕ್ಕ ಪುಸ್ತಕದಿಂದ ಹೊರಗಿಟ್ಟಿವೆ, ವಾಸ್ತವವಾಗಿ ಇದು ಆ ದೊಡ್ಡ ಕಾರ್ಪೊರೇಟ್‍ಗಳಿಗೆ ಮಾಡಿರುವ ಸಾಲಮನ್ನಾ ಎಂದು ಈ ರಂಗದ ತಜ್ಞರು ಹೇಳುತ್ತಾರೆ. ಅದರಲ್ಲಿ 52.3% ಅಥವಾ ರೂ 1.9 ಕೋಟಿ ದೊಡ್ಡ ಕೈಗಾರಿಕೆಗಳು ಮತ್ತು ಸೇವಾ ವಲಯಕ್ಕೆ ಸೇರಿದ ದೊಡ್ಡ ಸಂಸ್ಥೆಗಳದ್ದು ಎಂದು ಹಣಕಾಸು ರಾಜ್ಯ ಸಚಿವ ಭಾಗವತ್ ಕರದ್ ಲೋಕಸಭೆಗೆ ಡಿಸೆಂಬರ್ 4ರಂದು  ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕಾರ್ಪೊರೇಟ್‍

ಕಳೆದ ಐದು ವರ್ಷಗಳಲ್ಲಿ, ಬ್ಯಾಂಕ್‌ಗಳು ಸುಮಾರು 10.6 ಲಕ್ಷ ಕೋಟಿ ರೂಪಾಯಿಗಳಷ್ಟು ಮನ್ನಾ ಮಾಡಿವೆ, ಅದರಲ್ಲಿ ಸುಮಾರು 50% ದೊಡ್ಡ ಕೈಗಾರಿಕಾ ಸಂಸ್ಥೆಗಳಿಗೆ ಸೇರಿದೆ. ಸುಮಾರು 2,300 ಸಾಲಗಾರರು, ತಲಾ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲವನ್ನು ಬಾಕಿಯಿಟ್ಟಿದ್ದು, ಉದ್ದೇಶಪೂರ್ವಕವಾಗಿ ಬಾಕಿಮಾಡಿರುವ ಸಾಲಗಳ ಮೊತ್ತ ಸುಮಾರು 2 ಲಕ್ಷ ಕೋಟಿ ರೂ. ಅಂತಹ ಕಾರ್ಪೊರೇಟ್‌ಗಳ ಹೆಸರುಗಳನ್ನು ಕೇಳಿದಾಗ, ಸಚಿವರು ಸಾಲವನ್ನು ಮನ್ನಾ ಪಡೆದ ಕಂಪನಿಗಳ ಹೆಸರನ್ನು ಬಹಿರಂಗಪಡಿಸದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲೇಖಿಸಿದರು. “ಕಂಪನಿಗಳ ಹೆಸರಿಗೆ ಸಂಬಂಧಿಸಿದಂತೆ, ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 45 ಇ ಅಡಿಯಲ್ಲಿ ಸಾಲಗಾರ-ವಾರು ಸಾಲ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ” ಎಂದು ಸಚಿವರು ಹೇಳಿದರು. ಕಾರ್ಪೊರೇಟ್‍

2021-22 ರ ಹಣಕಾಸು ವರ್ಷದಲ್ಲಿ, ಒಟ್ಟು 1.75 ಲಕ್ಷ ಕೋಟಿ ರೂ.ಗೆ ಸಾಲಗಳ ರೈಟ್‍-ಆಫ್‍ ಆಗಿತ್ತು. ಅದರಲ್ಲಿ 39.8% ಅಥವಾ ರೂ. 69, 533 ಕೋಟಿ ದೊಡ್ಡ ಕಾರ್ಪೊರೇಟ್‍ ವಲಯದ್ದು. ಈ ರೀತಿಯ ಬ್ಯಾಂಕ್ ಸಾಲ ವಜಾಗಳಲ್ಲಿ ದೊಡ್ಡ ಕೈಗಾರಿಕೆಗಳು ಮತ್ತು ಸೇವೆಗಳ ಪಾಲು ಯಾವಾಗಲೂ ಅತ್ಯಧಿಕವಾಗಿದೆ ಎಂದು ಕಳೆದ ಐದು ವರ್ಷಗಳ ದತ್ತಾಂಶಗಳು ತೋರಿಸುತ್ತವೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಆರ್‌ಟಿಐ ಉತ್ತರದ ಭಾಗವಾಗಿ ,ಆರ್‌ಬಿಐ ನೀಡಿರುವ ಅಂಕಿಅಂಶಗಳ ಪ್ರಕಾರ, ಹಣಕಾಸು ವರ್ಷ 2012-13 ರಿಂದ ಬ್ಯಾಂಕ್‌ಗಳು ರೈಟ್‍-ಆಫ್‍ ಮಾಡಿದ ಸಾಲಗಳ ಮೊತ್ತ 15,31,453 ಕೋಟಿ ರೂ. ಇದು ಸಾಲಮನ್ನಾ ಅಲ್ಲ ಎನ್ನುತ್ತಾರೆ ಹಣಕಾಸು ಮಂತ್ರಿಗಳು. ” ಬ್ಯಾಂಕ್‌ಗಳ ಪುಸ್ತಕಗಳಲ್ಲಿ ಮರುಪಾವತಿಯಾಗದ ಸಾಲಗಳಾಗಿ ಉಳಿಯುತ್ತವೆ”, ಇವುಗಳ ವಸೂಲಿ ಪ್ರಯತ್ನ ಮುಂದುವರೆಯುತ್ತದೆ ಎನ್ನಲಾಗಿದೆ. ಆದರೆ ಆರ್ ಬಿ ಐ ಒದಗಿಸಿರುವ ಮಾಹಿತಿಗಳ ಪ್ರಕಾರವೇ ಕಳೆದ ಮೂರು ವರ್ಷಗಳಲ್ಲಿ ಮನ್ನಾ ಮಾಡಿದ 5.87 ಲಕ್ಷ ರೂ.ಗಳಿಂದ ಕೇವಲ 1.09 ಲಕ್ಷ ಕೋಟಿ ರೂ.ಗಳನ್ನು ಬ್ಯಾಂಕ್‌ಗಳು ವಸೂಲಿ ಮಾಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕೇವಲ ಶೇ.18.60ರಷ್ಟು ಸಾಲ ವಸೂಲಿ ಮಾಡಲು ಸಾಧ್ಯವಾಗಿದೆ .

ಈ ನಡುವೆ, ಈ ವರ್ಷದ ಜೂನ್‌ನಲ್ಲಿ, ಆರ್,ಬಿ.ಐ. ಬೇಕೆಂದೇ ಸುಸ್ತೀದಾರರಾಗುವವರೊಂದಿಗೆ “ರಾಜಿ ಇತ್ಯರ್ಥ” ದ ಸ್ಕೀಮನ್ನು ಪ್ರಸ್ತಾಪಿಸಿತ್ತು, ಇದನ್ನು ಬ್ಯಾಂಕ್ ನೌಕರರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದವು.

ಇದನ್ನೂ ಓದಿ: ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿ ಪ್ರವೇಶ ನಿರಾಕರಣೆ| ಗೂಳಿಹಟ್ಟಿ ಶೇಖರ್‌ ಆರೋಪ

ಇದು “ಕೇಂದ್ರ ಬ್ಯಾಂಕ್‌ನ ಹಾನಿಕಾರಕ ಹೆಜ್ಜೆ” ಎಂದು ಬಣ್ಣಿಸುತ್ತ, ಇದು ಇಡೀ ಬ್ಯಾಂಕಿಂಗ್‌ನ ಸಮಗ್ರತೆಗೆ ಧಕ್ಕೆ ತರುತ್ತದೆ, ಉದ್ದೇಶಪೂರ್ವಕವಾಗಿ
ಸುಸ್ತೀದಾರರಾಗುವ  ಅಪಾಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮಾಡುತ್ತಿರುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದು ಅವು ಹೇಳಿದವು.

“ಉದ್ದೇಶಪೂರ್ವಕ ಸುಸ್ತಿದಾರರು ಬ್ಯಾಂಕ್‌ಗಳ ಆರ್ಥಿಕ ಸ್ಥಿರತೆ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಾರೆ. ರಾಜಿ ಅಡಿಯಲ್ಲಿ ತಮ್ಮ ಸಾಲಗಳನ್ನು ಇತ್ಯರ್ಥಪಡಿಸಲು ಅವರಿಗೆ ಅವಕಾಶ ನೀಡುವ ಮೂಲಕ, ಆರ್‌ಬಿಐ ಮೂಲಭೂತವಾಗಿ ಅವರ ತಪ್ಪು ಕ್ರಮಗಳನ್ನು ಕ್ಷಮಿಸುತ್ತಿದೆ ಮತ್ತು ಅವರ ದುಷ್ಕೃತ್ಯಗಳ ಹೊರೆಯನ್ನು ಸಾಮಾನ್ಯ ನಾಗರಿಕರು ಮತ್ತು ಕಷ್ಟಪಟ್ಟು ಕೆಲಸ ಮಾಡುವ ಬ್ಯಾಂಕ್ ಉದ್ಯೋಗಿಗಳ ಹೆಗಲ ಮೇಲೆ ಹಾಕುತ್ತಿದೆ” ಎಂದು ನೌಕರರ ಸಂಘಟನೆಗಳು ಹೇಳಿದ್ದವು.

ಹಣಕಾಸು ಸಂಸತ್ತಿನ ಸ್ಥಾಯಿ ಸಮಿತಿಯು ಫೆಬ್ರವರಿ 2016 ರಲ್ಲಿ ಉದ್ದೇಶಪೂರ್ವಕ ಸುಸ್ತಿದಾರರ ಪ್ರಕರಣದಲ್ಲಿ, ನಾಮ ನಿರ್ದೇಶಿತ ಆರ್‌ಬಿಐ
ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಬ್ಯಾಂಕ್‌ಗಳ ಸಿಎಂಡಿಗಳ ಹೊಣೆಗಾರಿಕೆಯನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು ಎಂಬ ಸಂಗತಿಯತ್ತವೂ ಅವು ಗಮನ ಸೆಳೆದಿದ್ದವು.

“ಸ್ಥಾಯಿ ಸಮಿತಿಯು ಸೂಚಿಸಿದಂತೆ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ,” ಎಂದಿರುವ ಸಂಘಟನೆಗಳು  ಬ್ಯಾಂಕ್‍ ಮಂಡಳಿಗಳಲ್ಲಿ ಕೆಲವು “ನಿರ್ಣಾಯಕ ಹುದ್ದೆಗಳು” ಇನ್ನೂ ಏಕೆ ಭರ್ತಿಯಾಗದೆ ಉಳಿದಿವೆ ಎಂದು ಆರ್‌ಬಿಐ ಅನ್ನು ಪ್ರಶ್ನಿಸಿದವು,,  ಇದರಿಂದಾಗಿ “ಮೊಟಕುಗೊಳಿಸಿದ ಬ್ಯಾಂಕ್ ಮಂಡಳಿಗಳು” ಯಾವುದೇ ವಿರೋಧವನ್ನು ಎದುರಿಸದೆ ತ್ವರಿತವಾಗಿ “ರಾಜಿ ಇತ್ಯರ್ಥ”ಗಳಿಗೆ ತಲುಪಲು  ಕಾರಣವಾಗಬಹುದು” ಎಂದು ಎಚ್ಚರಿಸಿದವು ಕೂಡ.

ವಿಡಿಯೋ ನೋಡಿ: ಬಿಗ್‌ ಡಿಬೇಟ್‌ : ಐದು ರಾಜ್ಯಗಳ ಚುನಾವಣಾ ಫಲಿತಾಂಶ 2023| Assembly Election Results 2023

Donate Janashakthi Media

Leave a Reply

Your email address will not be published. Required fields are marked *