ಹಾಸನ: ಮಳೆಯ ಆರ್ಭಟ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜೋರಾಗಿದೆ. ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದು, ಸಕಲೇಶಪುರ ಮಾರ್ಗದಲ್ಲಿ ಸಂಚರಿಸೋ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಹೀಗಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ.
ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಇದರಿಂದಾಗಿ ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಮಣ್ಣು ಕುಸಿದ ಪರಿಣಾಮ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಮಾರ್ಗ ಬದಲಿಸಲು ಸಾಧ್ಯವಿರುವ ಕಡೆ ರೈಲು ಮಾರ್ಗವನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಬದಲಾಯಿಸಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲ : ಸ್ವಪಕ್ಷೀಯರ ವಿರುದ್ಧವೇ ಶಾಸಕ ಅರವಿಂದ ಲಿಂಬಾವಳಿ ಅಸಮಾಧಾನ
ಚಿಕ್ಕಮಗಳೂರಿನ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ
ಇನ್ನೂ ಭಾರಿ ಮಳೆಗೆ ಚಿಕ್ಕಮಗಳೂರಿನ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ.
ಇದರಿಂದಾಗಿ ಕೊಟ್ಟಿಗೆಹಾರದಲ್ಲಿ ಕಿ.ಮೀ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿವೆ. ಕಳೆದ ಎರಡು ಗಂಟೆಗಳಿಂದ ಚಿಕ್ಕಮಗಳೂರು ದಕ್ಷಿಣ ಕನ್ನಡ ಸಂಪರ್ಕ ಬಂದ್ ಆಗಿದೆ. ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ 3-4 ಕಡೆ ಬಂಡೆ ಕಲ್ಲುಗಳು ರಸ್ತೆಗೆ ಬಿದ್ದು ಅವಾಂತರ ಸೃಷ್ಟಿಯಾಗಿದೆ.
ಇದನ್ನೂ ನೋಡಿ: ಮೋದಿ 3.O ಸರ್ಕಾರದ ಬಜೆಟ್ ನ ಆಳ ಅಗಲ.. Janashakthi Media