ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ಅವರು ಬಿಡದಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಭೂಭರ್ತಿಗೆ ಹೋಗುವ ತ್ಯಾಜ್ಯದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು. ಬೆಂಗಳೂರು
ಜಿಬಿಎಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ 200 ಟನ್ ಒಣ ತ್ಯಾಜ್ಯವನ್ನು ಅಕ್ಟೋಬರ್ನಿಂದ ಪ್ರತಿನಿತ್ಯವೂ ವಿದ್ಯುತ್ ಉತ್ಪಾದನೆ ಘಟಕಕ್ಕೆ ಕಳುಹಿಸಲಾಗುತ್ತಿದೆ. ಹೀಗಾಗಿ, ಭೂಭರ್ತಿಗೆ ಹೋಗುತ್ತಿದ್ದ 390 ಕಾಂಪ್ಯಾಕ್ಟರ್ಗಳ ಸಂಖ್ಯೆ 340ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು. ಬೆಂಗಳೂರು
ಇದನ್ನೂ ಓದಿ : ಮೈಸೂರು | ಸಂಗೀತ ವಿವಿಯಿಂದ ಎಚ್. ಜನಾರ್ಧನ್ (ಜನ್ನಿ) ಸೇರಿದಂತೆ ಮೂವರಿಗೆ ಡಾಕ್ಟರೇಟ್
ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಸಹಭಾಗಿತ್ವದಲ್ಲಿ ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಗುರುವಾರ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡೂರಿನ ಹಳೆಯ ತ್ಯಾಜ್ಯದಿಂದ ಬೇರ್ಪಡಿಸಿದ 400 ಟನ್ ಒಣ ತ್ಯಾಜ್ಯವನ್ನು (ಆರ್ಡಿಎಫ್) ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ, ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸದಲ್ಲೇ ವಿಂಗಡಿಸಲಾದ 600 ಟನ್ ಒಣ ತ್ಯಾಜ್ಯವನ್ನು ವಿದ್ಯುತ್ ಘಟಕಕ್ಕೆ ಪ್ರತಿನಿತ್ಯ ಕಳುಹಿಸುವ ಗುರಿ ಹೊಂದಲಾಗಿದೆ. ಇದರಿಂದ ಭೂಭರ್ತಿ ಮೇಲಿನ ಅವಲಂಬನೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಇನ್ನೂ ಮೂರು ಘಟಕಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
‘ಈ ಘಟಕದಲ್ಲಿ ಒಂದು ದಿನ ಉತ್ಪಾದನೆಯಾಗುವ ವಿದ್ಯುತ್ ಅನ್ನು ನಿತ್ಯ ಸರಾಸರಿ 5 ಯೂನಿಟ್ ವಿದ್ಯುತ್ ಬಳಸುವ 25 ಸಾವಿರ ಮನೆಗಳಿಗೆ 24 ಗಂಟೆಯೂ ಸರಬರಾಜು ಮಾಡಬಹುದು. ಕಸದಿಂದ ವಿದ್ಯುತ್ ಉತ್ಪಾದಿಸುವ ರಾಜ್ಯದ ಮೊದಲ ಘಟಕ ಇದು. ಘಟಕದಿಂದ ಯಾವುದೇ ವಾಯುಮಾಲಿನ್ಯ ಉಂಟಾಗುವುದಿಲ್ಲ. ವಾಸನೆ ಹರಡದಂತೆ ಸಿಂಪಡಣೆ ಸೇರಿ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಜಿಬಿಎ ಮತ್ತು ಕೆಪಿಸಿಎಲ್ ನಡುವೆ ಒಪ್ಪಂದ ಮಾಡಿಕೊಂಡಿದ್ದು, ನಿರ್ಮಾಣ ವೆಚ್ಚದಲ್ಲಿ ತಲಾ ಶೇ 50ರಷ್ಟು ಪಾಲಿದೆ. ಒಟ್ಟು ₹314.74 ಕೋಟಿ ವೆಚ್ಚದಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಪುನರ್ಬಳಕೆ ಸಾಧ್ಯವಾಗದ ಪ್ಲಾಸ್ಟಿಕ್ ಹಾಗೂ ಒಣತ್ಯಾಜ್ಯವನ್ನು ಬಳಸಿ ಪ್ರತಿನಿತ್ಯ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಕೆಪಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಕುಮಾರ್ ತಿಳಿಸಿದರು.
‘ಅಕ್ಟೋಬರ್ ತಿಂಗಳಲ್ಲಿ ಘಟಕದ ಸಾಮರ್ಥ್ಯ ಶೇ 75ರಷ್ಟು ಪ್ರಮಾಣದಲ್ಲಿ ಬಳಕೆಯಾಗಿದ್ದು, 2024ರ ಜುಲೈನಿಂದ ಇದು ಅತಿಹೆಚ್ಚಿನ ಉತ್ಪಾದನೆಯಾಗಿದೆ. ಈವರೆಗೆ 1,68,036 ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗಿದ್ದು, 54.29 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ ಎಂದು ಮಾಹಿತಿ ನೀಡಿದರು.
‘ನಗರದಲ್ಲಿ ಮನೆಗಳಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಆಟೊ ಟಿಪ್ಪರ್ಗೆ ನೀಡಲು ಎಲ್ಲ ನಾಗರಿಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳ ಸ್ಥಾಪನೆಗೆ ಇದರಿಂದ ಸಹಕಾರಿಯಾಗುತ್ತದೆ. ಕೆಲವು ಭಾಗದಲ್ಲಿ ಜನರು ವಿಂಗಡಿಸಿಕೊಟ್ಟರೂ ಅದನ್ನು ನಮ್ಮ ಸಿಬ್ಬಂದಿ ಒಟ್ಟುಗೂಡಿಸುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ಪ್ರಕರಣಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಎಸ್ಡಬ್ಲ್ಯುಎಂಎಲ್ನ ಸಿಇಒ ಕರೀಗೌಡ ತಿಳಿಸಿದರು.
ಇದನ್ನೂ ನೋಡಿ : ಕಾರ್ಮಿಕರ ಮಕ್ಕಳ ʼಶಿಕ್ಷಾದೀಪʼ ಸಿoಘ್ವಿ ಚಾರಿಟೇಬಲ್ ಟ್ರಸ್ಟ್ Janashakthi Media
