ಬೆಂಗಳೂರು : ಭೂಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನಿಗೆ ಹೆಚ್ಚು ಪರಿಹಾರ ಕೊಡದಿದ್ದರೆ ನೈಸ್ ಸಂಸ್ಥೆ ಟೌನ್ ಶಿಪ್ಗಾಗಿ ಕೊಟ್ಟಿದ್ದ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಸಹಕಾರ ಖಾತೆ ಸಚಿವ ಎಸ್.ಟಿ.ಸೋಮೇಖರ್ ತಿಳಿಸಿದರು.
ಸೋಮವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, 26 ವರ್ಷಗಳ ಹಿಂದೆ ನೈಸ್ ಸಂಸ್ಥೆಗೆ ಟೌನ್ಶಿಪ್ ನಿರ್ಮಾಣಕ್ಕಾಗಿ 1906 ಎಕರೆ ನೀಡಲಾಗಿತ್ತು.ಆಗ ಪ್ರತಿ ಎಕರೆಗೆ 41 ಲಕ್ಷ ರೂ ಆ ಸಂಸ್ಥೆ ನೀಡಿತ್ತು. 2013 ರಲ್ಲಿ ಕೆಐಎಡಿಬಿ ಹೊಸ ದರ ಕೊಡಬೇಕು ಎಂಬ ನಿಯಮ ಮಾಡಿದೆ. ಅದರಂತೆ ಪ್ರತಿ ಎಕರೆಗೆ 3 ಕೋಟಿ ರೂ.ಗೂ ಹೆಚ್ಚು ಹಣ ಕೊಡಬೇಕು ಎಂದರು.
ಎಕರೆ 41 ಲಕ್ಷ ರೂ. ಕೊಟ್ಟಿರೋದು ರೈತರಿಗೆ ಅನ್ಯಾಯವಾಗಿದೆ. ರೈತರಿಗೆ ಅನ್ಯಾಯ ಆಗಲು ನಾವು ಬಿಡೊಲ್ಲ. ಸರ್ಕಾರ ರೈತರ ಪರವಿದೆ. ಎಕರೆಗೆ 3 ಕೋಟಿ ರೂ.ಗೂ ಹೆಚ್ಚು ಬೆಲೆ ಕೊಡಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕುತ್ತೇವೆ.ಅವರಿಗೆ ಕೊಟ್ಟಿರುವ ಜಮೀನು ವಾಪಸ್ ಪಡೆಯುತ್ತೇವೆ. ಈ ವಿಚಾರ ಮುಖ್ಯಮಂತ್ರಿ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ದಸರಾ ಆಚರಣೆ ಕುರಿತಂತೆ ವಾರದೊಳಗೆ ತೀರ್ಮಾನ: ಎಸ್.ಟಿ.ಸೋಮಶೇಖರ್
ರೈತರಿಗೆ ಒಳ್ಳೆ ಬೆಲೆ ಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನೈಸ್ ವಿಚಾರವಾಗಿ ವಾದ ಮಾಡಲು ಹೊಸ ಲಾಯರ್ ನೇಮಕ ಮಾಡುತ್ತಿದ್ದೇವೆ. ಎರಡು-ಮೂರು ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ನೈಸ್ ಟೋಲ್ ಅಕ್ರಮ ಸಂಗ್ರಹ ವಿಚಾರಕ್ಕೆ ಸಂಬಂಸಿದಂತೆ ಈಗಾಗಲೇ ನಾವು ಕೋರ್ಟ್ಗೆ ಹೋಗಿದ್ದೇವೆ. ಅವರು ತಡೆಯಾಜ್ಞೆ ತಂದಿದ್ದಾರೆ. ನಾವು ನೈಸ್ ಕೇಸ್ ವಾದ ಮಾಡಲು ಹೊಸ ವಕೀಲರ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.