- ಶಿರಾದಲ್ಲಿ ಒಳಮೀಸಲಾತಿ ಜಾರಿಗೆ ಬದ್ಧ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್
- ಒಳಮೀಸಲಾತಿಗೆ ವಿರೋಧಿಸುತ್ತಿರುವ ಲಂಬಾಣಿ, ಬಂಜಾರ ಸಮುದಾಯ
ಬಾಗಲಕೋಟೆ: ಲಂಬಾಣಿ ಸಮುದಾಯದವರು ಅಡವಿಯ ಹುಲಿಗಳು. ಒಳ ಮೀಸಲಾತಿಯ ನೆಪ ಮಾಡಿಕೊಂಡು ಅವರನ್ನು ಕೆಣಕಬೇಡಿ. ಪರಿಣಾಮ ಬೇರೆ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ವಿಜಯಪುರ ಜಿಲ್ಲೆ ಕೇಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಶಿರಾ ಉಪಚುನಾವಣೆ ಪ್ರಚಾರದ ವೇಳೆ ನಳಿನ್ ಕುಮಾರ ಕಟೀಲ್, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅದು ಖಂಡನೀಯ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿ ಹಾಗೂ ಸಮಾಜಗಳ ನಡುವೆ ಬೆಂಕಿ ಹಚ್ಚುತ್ತಿರುವ ನಳಿನ್ ಕುಮಾರ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದು ಬುದ್ಧಿ ಹೇಳಲಿ. ಇಲ್ಲದಿದ್ದರೆ ನಮ್ಮ ಸಮಾಜದಿಂದ ಬಿಜೆಪಿಯವರಿಗೆ ಬುದ್ಧಿವಾದ ಹೇಳುವ ದಿನಗಳು ಬರಲಿವೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಳಿನ್ ಕುಮಾರ ಕಟೀಲ್ ತಾಂಡಾಗಳಿಗೆ ಬಂದು ನೋಡಲಿ. ನಮ್ಮ ಜನ ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿದ್ದಾರೆ. ಮಕ್ಕಳನ್ನು ಸಾಕಲಾಗದೇ ಮಾರಾಟ ಮಾಡುತ್ತಿದ್ದಾರೆ. ತಾಂಡಾಗಳು ಸರಿಯಾದ ರಸ್ತೆ, ಕುಡಿಯುವ ನೀರಿನ ಸೌಕರ್ಯವಿಲ್ಲದೇ ಸಮಸ್ಯೆಯ ಕೂಪಗಳಾಗಿವೆ’ ಎಂದರು.
ನಳಿನ್ ಕುಮಾರ್ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಜಾರಿಗೊಳಿಸುವುದಾಗಿ ಹೇಳಿ ಪರಿಶಿಷ್ಟರಲ್ಲಿ ಗೊಂದಲ ಮೂಡಿಸಿರುವುದು ಸರಿಯಲ್ಲ. ಅವರು ಮನೆಯಲ್ಲಿ ಕುಳಿತು ರಾಜಕಾರಣ ಮಾಡುವ ಬದಲು ತಾಂಡಾಗಳಿಗೆ ಬಂದು ವಾಸ್ತವ ಅರಿತು, ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿ ಇಲ್ಲದಿದ್ದರೆ ಪರಿಶಿಷ್ಟರ ಪಟ್ಟಿಯಲ್ಲಿರುವ 101 ಸಮುದಾಯಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ತಾಕೀತು ಮಾಡಿದರು.