ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ 30 ದಿನ ನಿರ್ಬಂಧ ಹೇರಿದ ಆರ್ ಬಿ ಐ

  • ಹಣ ಹಿಂಪಡೆಯಲು 25,000 ರೂ. ಮಿತಿ
  • ಆಡಳಿತ ಮಂಡಳಿ ರದ್ದುಪಡಿಸಿದ ಆರ್‍ ಬಿಐ

 

ಮುಂಬೈ:  ಲಕ್ಷ್ಮಿ ವಿಲಾಸ್ ಬ್ಯಾಂಕ್‌ ಮೇಲೆ ಸರ್ಕಾರವು ಒಂದು ತಿಂಗಳ ತಾತ್ಕಾಲಿಕ ನಿಷೇಧ ಹೇರಿದ್ದು, ಬ್ಯಾಂಕ್‌ ಖಾತೆದಾರರಿಗೆ ಹಣ ಹಿಂಪಡೆಯುವ ಗರಿಷ್ಠ ಮಿತಿ ₹25,000 ವಿಧಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಹದಗೆಡುತ್ತಿದ್ದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ. ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಲಾಗಿದೆ.

ಆರ್‌ಬಿಐ ಪ್ರಕಟಣೆಯಲ್ಲಿ ‘ಬ್ಯಾಂಕಿನ ಪುನಶ್ಚೇತನಕ್ಕೆ ವಿಶ್ವಾಸಾರ್ಹ ಯೋಜನೆ ಇರಲಿಲ್ಲ. ಹೀಗಾಗಿ, ಠೇವಣಿದಾರರ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ, ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಗಳು ಇರಲಿಲ್ಲ’ ಎಂದು ಆರ್‌ಬಿಐ ಹೇಳಿದೆ ಎಂದು ತಿಳಿಸಿದೆ.

ಆರ್‌ಬಿಐನ ಮನವಿಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು, 30 ದಿನಗಳ ವರೆಗೂ ಬ್ಯಾಂಕ್‌ ಮೇಲೆ ನಿರ್ಬಂಧ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಆರ್‌ಬಿಐ ಅನುಮತಿ ಇಲ್ಲದೆಯೇ ಯಾವುದೇ ಕಾರಣದಿಂದಲೂ ಲಕ್ಷ್ಮಿ ವಿಲಾಸ್ ಬ್ಯಾಂಕ್‌, 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನ ಗ್ರಾಹಕರಿಗೆ ನೀಡುವಂತಿಲ್ಲ. ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್‌.ಮನೋಹರನ್‌ ಅವರನ್ನು ಬ್ಯಾಂಕ್‌ನ ಆಡಳಿತ ಅಧಿಕಾರಿಯಾಗಿ ನೇಮಿಸಲಾಗಿದೆ.

ಅರವತ್ತು ಶಾಖೆಗಳು

ಎಲ್‌ವಿಬಿ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಅನ್ವಯ, ಬ್ಯಾಂಕಿನ ಅರವತ್ತು ಶಾಖೆಗಳು ಕರ್ನಾಟಕದಲ್ಲಿ ಇವೆ. 2017ರ ಜುಲೈನಲ್ಲಿ  190 ರೂ. ಇದ್ದ ಈ ಬ್ಯಾಂಕಿನ ಷೇರು ಮೌಲ್ಯವು ಈಗ  15.50 ರೂ.ಗೆ ಕುಸಿತ ಕಂಡಿದೆ.

ಡಿಬಿಎಸ್‌ ಬ್ಯಾಂಕ್ ಜೊತೆ ವಿಲೀನ?

ಲಕ್ಷ್ಮೀ ವಿಲಾಸ್ ಬ್ಯಾಂಕ್‌ ಅನ್ನು ಸಿಂಗಪುರದ ಡಿಬಿಎಸ್‌ ಬ್ಯಾಂಕ್‌ನ ಭಾರತೀಯ ಘಟಕದ ಜೊತೆ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಆರ್‌ಬಿಐ ಮಂಗಳವಾರ ಮುಂದಿಟ್ಟಿದೆ. ಎಲ್‌ವಿಬಿ ಮಾರಾಟಕ್ಕೆ ಒಂದು ವರ್ಷದಿಂದಲೂ ಯತ್ನ ನಡೆದಿದೆ. ಖರೀದಿದಾರನ್ನು ಎಲ್‌ವಿಬಿ ಅರಸುತ್ತ ಇದೆ. ಇಂಡಿಯಾ ಬುಲ್ಸ್‌ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಜೊತೆ ಎಲ್‌ವಿಬಿಯನ್ನು ವಿಲೀನ ಮಾಡುವ ಪ್ರಸ್ತಾವನೆಯನ್ನು ಆರ್‌ಬಿಐ ಕಳೆದ ವರ್ಷ ತಿರಸ್ಕರಿಸಿತ್ತು.

Donate Janashakthi Media

Leave a Reply

Your email address will not be published. Required fields are marked *