ಬೆಂಗಳೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ, ಪ್ರಗತಿಪರ ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ರು, ಚಿಕಿತ್ಸೆ ಫಲಿಸದೆ ನಿಧನದ್ದಾರೆ.
ನಾಗವಾರ ರಿಗೆ 58 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಮಿತ್ರರು ಹಾಗೂ ಸಂಘಟನೆಯ ಅಪಾರ ಸಂಖ್ಯೆ ಒಡನಾಡಿಗಳನ್ನು ಅಗಲಿದ್ದಾರೆ. ಕಳೆದ 2 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಬೆಂಗಳೂರಿನ ಕನಕ ನಗರದಲ್ಲಿ ವಾಸವಾಗಿದ್ದ ಲಕ್ಷ್ಮಿ ನಾರಾಯಣ ಅವರಿಗೆ ಮಂಗಳವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ
ಬೆಂಗಳೂರು ನಗರದ ನಾಗವಾರ ಮೂಲದ ಲಕ್ಷ್ಮಿ ನಾರಾಯಣ, ವಿದ್ಯಾರ್ಥಿ ದೆಸೆಯಲ್ಲಿ ದಲಿತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು. ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಇನ್ನೂ 2022ರ ಡಿಸೆಂಬರ್ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ದಲಿತ ಸಾಂಸ್ಕೃತಿಕ ಪ್ರತಿರೋಧʼದಲ್ಲಿ ಭಾಗಿಯಾಗಿದ್ದೇ ಲಕ್ಷ್ಮಿನಾರಾಯಣ ನಾಗವಾರ ಅವರ ಕೊನೆಯ ಕಾರ್ಯಕ್ರಮವಾಗಿತ್ತು.
ಇದನ್ನೂ ಓದಿ: ರಂಗ ವೈವಿಧ್ಯತೆಗೆ ಸಾಕ್ಷಿಯಾದ ಒಂದು ಪ್ರಯೋಗ
ಲಕ್ಷ್ಮಿನಾರಾಯಣ ನಾಗವಾರ ಅವರು, ದಲಿತ ಚಳವಳಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ, ಡಾ.ಸಿದ್ದಲಿಂಗಯ್ಯ ಮತ್ತು ದೇವನೂರು ಮಹಾದೇವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹಲವು ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿಯಾಗಿದ್ದಾರೆ. ಲಕ್ಷ್ಮಿನಾರಾಯಣ ನಾಗವಾರ ಅವರು ತಾಲೂಕು, ಜಿಲ್ಲಾ, ವಿದ್ಯಾರ್ಥಿ, ಯುವಜನ ಸಂಘ ಸೇರಿದಂತೆ ರಾಜ್ಯ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ಲಕ್ಷ್ಮಿನಾರಾಯಣ ಅವರ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ನಾಡಿನ ಜನಪ್ರಿಯ ದಲಿತ ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಲಿತ ಸಮುದಾಯವನ್ನೇ ತನ್ನ ಕುಟುಂಬವನ್ನಾಗಿಸಿಕೊಂಡಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು ಸಂಘಟನೆ ಮತ್ತು ಹೋರಾಟದ ಮೂಲಕ ದನಿ ಇಲ್ಲದ ದಮನಿತ ಸಮುದಾಯಕ್ಕೆ ದನಿಯಾಗಿದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಯಾವ ಮೂಲೆಯಲ್ಲಿಯೂ ದಲಿತರ ಮೇಲೆ ಅನ್ಯಾಯ-ದೌರ್ಜನ್ಯ ನಡೆದರೂ ಅಲ್ಲಿಗೆ ಧಾವಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು, ಇಡೀ ರಾಜ್ಯ ಸುತ್ತಾಡಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದವರು. ಹೆಚ್ಚು ಕಡಿಮೆ ಮೂರು ದಶಕಗಳಿಂದ ನನ್ನ ಜೊತೆ ಒಡನಾಟ ಹೊಂದಿದ್ದ ಲಕ್ಷ್ಮಿನಾರಾಯಣ ನಾಗವಾರರ ನಿಧನದಿಂದ ನಾನೂ ಒಬ್ಬ ಆತ್ಮೀಯ ಸಂಗಾತಿಯನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಇನ್ನೂ ಸಚಿವ ಹೆಚ್ ಡಿ ಮಹದೇವಪ್ಪ ಅವರು ಸಂತಾಪ ಸೂಚಿಸಿದ್ದು, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು, ಸಾಮಾಜಿಕ ಬದ್ಧತೆಯ ಹೋರಾಟಗಾರರಾದ ಲಕ್ಷ್ಮಿನಾರಾಯಣ ನಾಗವಾರ ಅವರು ನಮ್ಮನಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ದಶಕಗಳ ಕಾಲ ವಿಷಯಾಧಾರಿತ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದ ಅವರ ಅಗಲಿಕೆ ಹೋರಾಟದ ವಲಯಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ಲಭ್ಯವಾಗಲಿ ಎಂದು ಮನದುಂಬಿ ಪ್ರಾರ್ಥಿಸುವೇನು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಅವರ ಅಂತ್ಯ ಸಂಸ್ಕಾರ ನಾಳೆ (ಜನವರಿ 1) ಮಧ್ಯಾಹ್ನ 3 ಗಂಟೆಗೆ ನಾಗವಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ನೋಡಿ: ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ