ತಿರುವನಂತಪುರ: ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅಪರಾಧಿಯೆಂದು ಜನವರಿ 11ರಂದು ಲಕ್ಷದ್ವೀಪದ ಕವರಟ್ಟಿಯ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಫೈಜಲ್ ಶಿಕ್ಷೆಗೆ ಗುರಿಯಾಗಿರುವುದರಿಂದ ಲೋಕಸಭೆ ಸಚಿವಾಲಯ ಅವರ ಸಂಸದ ಸ್ಥಾನ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿದೆ.
2009ರಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಪಿ.ಎಂ. ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲೆ ಮಾಡಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಸಂಸದ ಮೊಹಮ್ಮದ್ ಫೈಜಲ್ ಸಂಚು ರೂಪಿಸಿರುವುದು ಸಾಬೀತಾಗಿದೆ.
ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ಲಕ್ಷದ್ವೀಪದ ಸೆಷನ್ಸ್ ನ್ಯಾಯಾಲಯ, ಕೊಲೆ ಯತ್ನ ಪ್ರಕರಣದಲ್ಲಿ ಮೊಹಮ್ಮದ್ ಫೈಜಲ್ ಸೇರಿದಂತೆ ನಾಲ್ವರು ಅಪರಾಧಿಗಳಿಗೆ 10 ವರ್ಷ ಜೈಲು ಮತ್ತು ತಲಾ ಒಂದು ಲಕ್ಷ ದಂಡ ವಿಧಿಸಿತ್ತು.
ಸಂಸದ ಸ್ಥಾನ ಅನರ್ಹತೆ ಬಗ್ಗೆ ಲೋಕಸಭೆ ಸಚಿವಾಲಯ ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 8 ರೊಂದಿಗೆ ಓದಿದ ಭಾರತದ ಸಂವಿಧಾನದ 102 (ಎಲ್) (ಇ) ನಿಬಂಧನೆಗಳ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ