ಲಕ್ನೋ: ಪೊಲೀಸರು ಇಂದು ಬೆಳಗ್ಗೆಯಿಂದ ಆಶಿಶ್ ಮಿಶ್ರಾ ಅವರ ವಿಚಾರಣೆ ನಡೆಸಿದ್ದು, ರೈತರ ಹತ್ಯೆ ವೇಳೆ ಚಿತ್ರೀಕರಿಸಲಾದ ವಿಡಿಯೋದಲ್ಲಿದ್ದ ಒಂದು ಎಸ್ಯುವಿಯನ್ನು ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದರು ಎಂಬುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಎಸ್ಐಟಿ ಪೊಲೀಸರು ತಡರಾತ್ರಿಯಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 03ರಂದು ನಡೆದ ಹತ್ಯೆ ಮತ್ತು ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು. ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಸಾಗುತ್ತಿದ್ದಾಗ ಅವರ ಮೇಲೆ ಎರಡು ಕಾರುಗಳು ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದರು.
ಇದನ್ನು ಓದಿ: ರೈತರ ಮೇಲೆ ಕಾರು ಹರಿಸಿದ ಭಯಾನಕ ದೃಶ್ಯ ಮೊಬೈಲ್ ಸೆರೆ: ಧಾಳಿ ಮಾಡಲೆಂದೇ ಕಾರು ನುಗ್ಗಿಸಿದ್ದು
ಅಂದು ಆ ಎರಡು ಎಸ್ಯುವಿಗಳಲ್ಲಿ ಒಂದು ಕಾರನ್ನು ಚಲಾಯಿಸುತ್ತಿದ್ದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂಬ ಆರೋಪವಿದ್ದರೂ ಸಹ ಘಟನೆ ನಡೆದು ವಾರಗಳೇ ಕಳೆದರೂ ಆಶಿಶ್ ಮಿಶ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾ ತಂಡ ನೋಟಿಸ್ ನೀಡಿತ್ತು.
ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಕೃಷಿ ಕಾಯ್ದೆ ವಿರೋಧಿಸಿ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ರೈತರನ್ನು ಕಾರಿನಿಂದ ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಒಂದರ ಹಿಂದೊಂದು ವೇಗವಾಗಿ ಬಂದ ಎಸ್ಯುವಿ ಕಾರುಗಳು ರೈತರಿಗೆ ಡಿಕ್ಕಿ ಹೊಡೆದು ಹೋಗಿತ್ತು. ಬಳಿಕ ಅದರಲ್ಲಿ ಒಂದು ಕಾರನ್ನು ರೈತರು ಸುಟ್ಟು ಹಾಕಿದ್ದರು. ಆ ದಿನ ಉದ್ದೇಶಪೂರ್ವಕವಾಗಿಯೇ ವೇಗವಾಗಿ ಬಂದು ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ, ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು, ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.
ಇದನ್ನು ಓದಿ: ರೈತರನ್ನು ಕೊಂದ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಿ: ಸಂಯುಕ್ತ ಕಿಸಾನ್ ಮೋರ್ಚಾ
ಅಂದು ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇಂದು ವಿಚಾರಣೆಗೆ ಹಾಜರಾಗಿದ್ದ ಆಶಿಶ್ ಮಿಶ್ರಾ ಅವರನ್ನು ಇಡೀ ದಿನ ವಿಚಾರಣೆ ನಡೆಸಿದ ಉತ್ತರ ಪ್ರದೇಶದ ಎಸ್ಐಟಿ ತಂಡ ತಡರಾತ್ರಿಯಲ್ಲಿ ತಮ್ಮ ವಶಕ್ಕೆ ಪಡೆದಿದೆ.
ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.