ನವದೆಹಲಿ: ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
2021 ರ ಅಕ್ಟೋಬರ್‌ನಲ್ಲಿ ಐದು ಜನ ರೈತರ ಹತ್ಯೆಗೆ ಕಾರಣವಾಗಿರುವ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಎಂಟು ವಾರಗಳ ಅವಧಿಗೆ ಮಿಶ್ರಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನಿನ ಒಂದು ವಾರದೊಳಗೆ ಉತ್ತರ ಪ್ರದೇಶ ರಾಜ್ಯವನ್ನು ತೊರೆಯುವಂತೆ ಕೋರ್ಟ್ ಮಿಶ್ರಾಗೆ ನಿರ್ದೇಶನ ನೀಡಿದೆ ಹಾಗೂ ಮಧ್ಯಂತರ ಜಾಮೀನಿನ ಅವಧಿಯಲ್ಲಿ ಉತ್ತರಪ್ರದೇಶ ರಾಜ್ಯ ಅಥವಾ ದೆಹಲಿ ಎನ್‌ಸಿಟಿಯಲ್ಲಿ ಉಳಿಯದಂತೆ ನಿರ್ದೇಶಿಸಿದೆ.
ಅಲ್ಲದೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಾತ್ರ ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮಿಶ್ರಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಪ್ರಯತ್ನವು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಸುಪ್ರೀಕೋರ್ಟ್ ತಿಳಿಸಿದೆ ಎಂದು ವರದಿಯಾಗಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠವು ಮಿಶ್ರಾ ಸಲ್ಲಿಸಿದ ಖಾಯಂ ಜಾಮೀನು ಅರ್ಜಿಯನ್ನು ಬಾಕಿ ಇರಿಸಲು ನಿರ್ಧರಿಸಿತು ಹಾಗೂ ಮಿಶ್ರಾಗೆ ಮಧ್ಯಂತರ ಜಾಮೀನು ನೀಡಿತು.
ಇದನ್ನೂ ಓದಿ : ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್
ಅಕ್ಟೋಬರ್ 9 ರಂದು ಮಿಶ್ರಾರನ್ನು ಬಂಧಿಸಲಾಗಿತ್ತು. ನಂತರ ಫೆಬ್ರವರಿ 2022 ರಲ್ಲಿ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ನೀಡಿದ ಫೆಬ್ರವರಿ 10, 2022 ರ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 2022 ರಲ್ಲಿ ರದ್ದುಗೊಳಿಸಿತ್ತು. ಹೀಗಾಗಿ ಮಿಶ್ರಾ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು. ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಮುಂದುವರಿಸಲು ಸಾಧ್ಯವಿಲ್ಲ ಮತ್ತು ಅದನ್ನು ರದ್ದುಗೊಳಿಸಬೇಕು ಮತ್ತು ಪ್ರತಿವಾದಿ/ಆರೋಪಿಗಳ ಜಾಮೀನು ಬಾಂಡ್‌ಗಳನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜೊತೆಗೆ ಒಂದು ವಾರದೊಳಗೆ ಶರಣಾಗುವಂತೆ ಆಶಿಶ್ ಮಿಶ್ರಾ ಅವರಿಗೆ ಕೋರ್ಟ್ ಸೂಚಿಸಿತ್ತು.
ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಖೀಂಪುರ ಖೇರಿ ಘಟನೆಯ ಸಂತ್ರಸ್ತರ ಕುಟುಂಬದವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ನಂತರ ಮಿಶ್ರಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಹಿಂದೆ, ಲಖಿಂಪುರ ಖೇರಿ ಹಿಂಸಾಚಾರದ ತನಿಖೆಯ ಮೇಲ್ವಿಚಾರಣೆಗಾಗಿ ಪಂಜಾಬ್ ಮತ್ತು ಹರಿಯಾಣದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ನೇತೃತ್ವದ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ