ಹಾವೇರಿ: ಲೈಂಗಿಕ ಪ್ರಕರಣ ಆರೋಪದಲ್ಲಿರುವ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಹಾಗೂ ದೇವರಗುಡ್ಡದ ಹೈಸ್ಕೂಲ್‌ನ ಶಿಕ್ಷಕ ಮೇಲೆ ಶಿಸ್ತು ಕ್ರಮಜರುಗಿಸಿ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ʻʻಹಾವೇರಿ ಜಿಲ್ಲೆಯಲ್ಲಿ ಇತ್ತೀಚಿಗೆ ವಿದ್ಯಾರ್ಥಿನಿಯರ, ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಲೈಂಗಿಕ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಇರುವುದು ಈ ಘಟನೆಗಳಿಗೆ ಕಾರಣವಾಗಿವೆ. ಜಿಲ್ಲೆಯ ರಾಣೇಬೆನ್ನೂರ ತಾಲ್ಲೂಕಿನ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ಪ್ರೌಢಶಾಲೆಯ ಮಲ್ಲಪ್ಪ ಏಳಕೋಟೆಪ್ಪ ತಳವಾರ ಆರೋಪಿ ಶಿಕ್ಷಕ, ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮಂಗಳವಾರ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕೋರಿದ್ದನು. ಗಾಬರಿಯಾದ ವಿದ್ಯಾರ್ಥಿನಿ ಸಂಜೆ ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಪೋಷಕರು ಊರಿನ ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ದೂರ ನೀಡಿದ್ದಾರೆ ಮತ್ತು ಈ ಪ್ರಕರಣ ಕುರಿತು ವಿದ್ಯಾರ್ಥಿನಿ ಪೋಷಕರು ಕೇಸ್ ದಾಖಲು ಕೂಡ ಮಾಡಿದ್ದಾರೆ ತಪ್ಪಿತಸ್ಥ ಆರೋಪಿಯನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹಾಸ್ಟೆಲ್‌ನಲ್ಲಿ ಅಡುಗೆ ಸಿಬ್ಬಂದಿಯೋರ್ವರಿಗೆ ಅಶ್ಲೀಲ ಸಂದೇಶ ಕಳಿಸಿ ಕಿಚಕ ಕೃತ್ಯ ಎಸಗಲು ಹೋಗಿ ಜಿಲ್ಲಾಡಳಿತ ಭವನದಲ್ಲಿನ ಕಚೇರಿಯಲ್ಲಿಯೇ ಧರ್ಮದೇಟು ತಿಂದಿರುವ ಘಟನೆ ನವೆಂಬರ್ 23ರಂದು ನಡೆದಿದೆ. ಐದಾರು ತಿಂಗಳ ಹಿಂದೆಯಷ್ಟೇ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿರುವ ಈ ಕಿಚಕ ಕಾಮುಕ ಅಧಿಕಾರಿ ಹಾಸ್ಟೆಲ್‌ಗಳಿಗೆ ಭೇಟಿ ಕೊಟ್ಟು ಅಲ್ಲಿ ಕೆಲಸ ಮಾಡುವ ಮಹಿಳಾ ನೌಕರರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಪ್ರತಿದಿನ ರಾತ್ರಿಯಾದರೆ ಸಾಕು ಹಾಸ್ಟೆಲ್ ಭೇಟಿ ನೀಡುವ ನೆಪದಲ್ಲಿ ಅಲ್ಲಿಗೆ ಹೋಗಿ ಊಟವನ್ನು ಮಾಡುತ್ತಿದ್ದ. ಹೀಗೆ ದಿನ ಕಳೆಯುತ್ತಾ ಅಡುಗೆಯವಳೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿ ಅಶ್ಲೀಲವಾಗಿ ಎಸ್‌ಎಂಎಸ್‌ಗಳನ್ನು ಕಳಿಸಿದ್ದು. ಮೊದಲು ಹಿರಿಯ ಅಧಿಕಾರಿ ಎಂದು ಸುಮ್ಮನಿದ್ದ ಅಡುಗೆ ಸಿಬ್ಬಂದಿ ಈತನ ವರ್ತನೆ ಅತಿಯಾದಾಗ ಪತಿಗೆ ವಿಷಯ ತಿಳಿಸಿದ್ದಾಳೆ. ಆಗ ಇಬ್ಬರು ಸೇರಿ ಅಧಿಕಾರಿಯ ಕಚೇರಿಗೆ ಹೋಗಿ ಅವನ ಚೇಂಬರ್‌ನಲ್ಲಿಯೇ ಥಳಿಸಿದ್ದಾರೆ. ಈ ಕಿಚಕ ಅಧಿಕಾರಿ ವಸತಿ ನೀಲಯಕ್ಕೆ ಪದೇಪದೇ ಭೇಟಿ ನೀಡಿರುವುದು, ಮಹಿಳೆಯನ್ನು ಎಳೆದಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಅಡುಗೆ ಸಿಬ್ಬಂದಿ ಹೇಳುತ್ತಿದ್ದು ಇಷ್ಟೆಲ್ಲಾ ಸಮಸ್ಯೆಗಳು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದಿರುವುದು ನಾಚಿಕೆಗೆಡಿತನ. ಜಿಲ್ಲಾಡಳಿತ ಭವನದಲ್ಲಿ ಸದ್ದು ಮಾಡುತ್ತಿದ್ದರೂ ಜಿಲ್ಲಾಧಿಕಾರಿಗಳು ಇವರು ವಿರುದ್ಧ ಇನ್ನುವರೆಗೂ ಯಾವುದೇ ಕ್ರಮವನ್ನು ಜರುಗಿಸಲು ಮುಂದಾಗದೇ ಇರುವುದು ಸರಿಯಲ್ಲ ಈ ಕೂಡಲೇ ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಸ್‌ಎಫ್‌ಐ ಸಂಘಟನೆಯು ಆಗ್ರಹಿಸಿದೆ.
ಬೇಡಿಕೆಗಳು :-
- ರಾಣೇಬೆನ್ನೂರ ತಾಲ್ಲೂಕಿನ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ಪ್ರೌಢ ಶಾಲೆಯ ತಪ್ಪಿತಸ್ಥ ಆರೋಪಿ ಶಿಕ್ಷಕನನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು.
- ಇಬ್ಬರು ಅಧಿಕಾರಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು.
- ನಗರದ ಹೊರ ವಲಯದಲ್ಲಿರುವ ಶಾಲಾ ಕಾಲೇಜು ವಿವಿ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬೀಟ್ ಪೋಲಿಸ್ ರನ್ನು ನೇಮಿಸಬೇಕು.
- ನಗರದ ಹೊರವಲಯ ಹಾಗೂ ನಗರದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ದುರಸ್ತಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಬದಲಾಯಿಸಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ಶಾಲಾ-ಕಾಲೇಜು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಪದೇಶಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚನೆ ಮಾಡಬೇಕು.
- ಪ್ರೋ ವರ್ಮಾ ಸಮಿತಿಯ ಶಿಪಾರಸುಗಳನ್ನು ಜಾರಿ ಮಾಡಬೇಕು.
ಈ ಪ್ರಕರಣಗಳು ಜಿಲ್ಲಾದ್ಯಂತ ಪ್ರತಿ ದಿನವೂ ನಡೆಯುತ್ತಿದ್ದು ಸರ್ಕಾರ ಇವುಗಳ ಬಗ್ಗೆ ಗಮನ ನೀಡದೆ ಇರುವುದು ಈ ರೀತಿಯ ಘಟನೆಗಳು ಹೆಚ್ಚಾಗಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡಬೇಕು ಆದರೆ, ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಿಲ್ಲ ತಕ್ಷಣ ಇದನ್ನು ರಚನೆ ಮಾಡಬೇಕು. ಇಂತಹ ಆರೋಪಿಗಳಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಿ ವಿದ್ಯಾರ್ಥಿನಿಯರಿಗೆ, ಹಾಸ್ಟೆಲ್ ಸಿಬ್ಬಂದಿಗಳಿಗೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಮಂಜುನಾಥ ಅಂಗಡಿ, ಆಕಾಶ್ ಗುಡ್ಡಪ್ಪನವರ, ವಿರೇಶ್ ಅಕ್ಕಿ, ಸಂಗಮೇಶ್ ವಾಲ್ಮೀಕಿ, ಪ್ರವೀಣ್ ಬಾಣದ, ಸಂಗಮೇಶ್ ಕೆ, ಹೊನ್ನಪ್ಪ ಕುದರಿಹಾಳ ಉಪಸ್ಥಿತರಿದ್ದರು.