ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ನಡುವೆಯೂ ಕಲೆಯ ಕ್ಷೇತ್ರದಲ್ಲಿ ದೃಢತೆ ಕಾಪಾಡಿಕೊಂಡು ಮುಂದುವರಿಯುತ್ತಿರುವ ಕನ್ನಡ ನಾಡಿನ ಉತ್ಸಾಹಿ ಕಲಾವಿದರು ಕಲಾಕ್ಷೇತ್ರದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯುವ ರೀತಿಯಲ್ಲಿ ಮುದ್ರಣ ಕಲಾಕೃತಿಗಳನ್ನು ರಚಿಸಿದ್ದಾರೆ.
ದುಡಿಮೆ ನಿಂತು ಎದುರಾದ ಮುಳ್ಳಿನ ಹಾದಿ ದಾಟಿ ರಚಿಸಿರುವ ಕಲಾಕೃತಿಗಳನ್ನು ನಾಡಿನ ಜನತೆಯೆ ಮುಂದೆ ಪ್ರದರ್ಶಿಸುವ ಉದ್ದೇಶ ಕಲಾವಿದರದ್ದು. ರಾಜ್ಯದ 75ಕ್ಕೂ ಹೆಚ್ಚು ವೃತ್ತಿಪರ ಕಲಾವಿದರು ಪ್ರಿಂಟ್ ಮೇಕಿಂಗ್ ಪ್ರಕಾರಗಳಲ್ಲಿ ಒಂದಾದ ವುಡ್‌ಕಟ್ ಪದ್ಧತಿಯಲ್ಲಿ 8 ರಿಂದ 4 ಅಡಿಗಳ ಅಳತೆಯ ಕಲಾಕೃತಿಗಳನ್ನು ರಚಿಸಿದ್ದಾರೆ.
ಪ್ರತಿಯೊಬ್ಬ ಕಲಾವಿದರೂ ತಮ್ಮ ಮನೆಯಲ್ಲೇ ಲಭ್ಯವಿರುವ ಸಾಧನಗಳನ್ನು ಉಪಯೋಗಿಸಿ ಈ ಕಲಾಕೃತಿಗಳನ್ನು ರಚಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಬೃಹತ್ ಅಳತೆಯಲ್ಲಿ 75ಕ್ಕೂ ಹೆಚ್ಚು ಮಂದಿ ಕಲಾವಿದರ ಕಲಾಕೃತಿ ಪ್ರದರ್ಶನ ನಡೆಯುತ್ತಿದೆ.
ಅನಿಶ್ಚಿತತೆ ವುಡ್‌ಕಟ್ ಕಲಾಕೃತಿಗಳ ಪ್ರದರ್ಶನವು ಸೆಪ್ಟೆಂಬರ್ 22 ರಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಕಲಾಕೃತಿಗಳ ಪ್ರದರ್ಶನ ಆರಂಭವಾಗಿದ್ದು, ಅಕ್ಟೋಬರ್ 3ರವರೆಗೂ ಪ್ರದರ್ಶನ ನಡೆಯಲಿದೆ.