ಹಿರಿಯ ಕಾರ್ಮಿಕ ನಾಯಕ ಹರೀಶ್ ನಾಯ್ಕ (71) ನಿಧನ

ಅರ್ಗೆ ಹರೀಶ ನಾಯ್ಕ ಎಂಬ ಹೆಸರಿನಲ್ಲಿ ಸಾಹಿತ್ಯದ ಕೃಷಿಯಲ್ಲೂ ತೊಡಗಿಕೊಂಡಿದ್ದ ಅವರು ಸರ್ವರಿ ಸಂಚರಣ ಮತ್ತು ಆವಿಷ್ಕರ ಅವರ ಕಾದಂಬರಿಯನ್ನು ಬರೆದಿದ್ದಾರೆ ಹರೀಶ್ ನಾಯ್ಕ

ಉತ್ತರ ಕನ್ನಡ: ಕಾರ್ಮಿಕ ಸಂಘಟನೆ ಸಿಐಟಿಯು ರಾಜ್ಯ ಉಪಾಧ್ಯಕ್ಷ, ಹೋರಾಟಗಾರ ಹರೀಶ್ ನಾಯ್ಕ ಅವರು ಜಿಲ್ಲೆಯ ಜೋಯಿಡಾದ ರಾಮನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೂಲತಃ ಕಾರವಾರದವರಾದ ಹರೀಶ್‌ ಅವರು ಸ್ನಾತಕೋತ್ತರ ಪದವಿ ಪಡೆದಿದ್ದರು. ದಾಂಡೇಲಿಯ ಪೇಪರ್ ಮಿಲ್‌ನಲ್ಲಿ ಕಾರ್ಮಿಕರಾಗಿ ಕಾರ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕ ಚಳುವಳಿ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ದಾಂಡೇಲಿ ನಗರ ಸಭೆಗೆ ಉಪಾಧ್ಯಕ್ಷರಾಗಿ ಹಂಗಾಮಿ ಅಧ್ಯಕ್ಷರಾಗಿ ಕೂಡಾ ಹರೀಶ್ ನಾಯ್ಕ ಅವರು ಸೇವೆ ಸಲ್ಲಿಸಿದ್ದಾರೆ. ಸಿಐಟಿಯು ಜಿಲ್ಲಾ ಸಮಿತಿಗೆ ಎರಡು ಅವಧಿ ಅಧ್ಯಕ್ಷರಾಗಿದ್ದ ಅವರು, ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿ, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  ಹಳಿಯಾಳ ರೈತ ಹೋರಾಟ ಮತ್ತು ಮಾವಳಂಗಿ ಭೂಮಿ ಹೋರಾಟದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.

ಅರ್ಗೆ ಹರೀಶ ನಾಯ್ಕ ಎಂಬ ಹೆಸರಿನಲ್ಲಿ ಸಾಹಿತ್ಯದ ಕೃಷಿಯಲ್ಲೂ ತೊಡಗಿಕೊಂಡಿದ್ದ ಅವರು ಸರ್ವರಿ ಸಂಚರಣ ಮತ್ತು ಆವಿಷ್ಕರ ಅವರ ಕಾದಂಬರಿಯನ್ನು ಬರೆದಿದ್ದಾರೆ. ‘ಆವಿಷ್ಕರ’ ಅಚ್ಚಿನಲ್ಲಿದ್ದು, ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಅದಲ್ಲದೆ ಅವರು ಹಲವಾರು ಕವನಗಳನ್ನು ಬರೆದಿದ್ದಾರೆ. ರಂಗಭೂಮಿಯಲ್ಲಿ ಕೂಡಾ ತನ್ನ ಛಾಪು ಮೂಡಿಸಿದ್ದ ಅವರು, ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು.

ಇದನ್ನೂ ಓದಿ: ಧರ್ಮಸ್ಥಳ ಹೆಗ್ಗಡೆ ಪರ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬ ಸದಸ್ಯರ ಮೇಲೆ ಹಲ್ಲೆಗೆ ಯತ್ನ!

ಕಾರ್ಮಿಕ ಕಾನೂನುಗಳ ಬಗ್ಗೆ ಅರಿತಿದ್ದ ಅವರು ಆರಂಭದಲ್ಲಿ ಹಂಚು ಕಾರ್ಮಿಕರ ಸಂಘ, ಪಂಚಾಯತ್ ಕಾರ್ಮಿಕರು, ಕಾರವಾರದಲ್ಲಿ ಗುತ್ತಿಗೆ ಕಾರ್ಮಿಕರ ಸಂಘ, ಕದ್ರಾ, ಅಂಬಿಕಾನಗರ, ಗಣೇಶ್ ಗುಡಿ ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಂಘ, ಕೈಗಾ ಅಣು ವಿದ್ಯುತ್ ಸ್ಥಾವರ ಗುತ್ತಿಗೆ ಕಾರ್ಮಿಕರ ಸಂಘ, ವನ್ಯಜೀವಿ ಗುತ್ತಿಗೆ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರು ಮತ್ತು ಗ್ರಾಮೀಣ ಕೆಲಸಗಾರರ ಸಂಘ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅಷ್ಟೆ ಅಲ್ಲದೆ, ಅಂಗನವಾಡಿ ನೌಕರರು, ಅಕ್ಷರದಾಸೋಹ, ಆಶಾ ನೌಕರರ ಹೋರಾಟಗಳಿಗೆ ಹರೀಶ್ ಮಾರ್ಗದರ್ಶನ ನೀಡಿದ್ದರು. ಪ್ರಸ್ತುತ ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಹರೀಶ್ ಅವರು, ಸಿಐಟಿಯುನ ರಾಜ್ಯ ಉಪಾಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದರು. ಮೃತರ ಅಂತಿಮ ದರ್ಶನ 5 ಗಂಟೆ ವರೆಗೆ ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದು, ಅವರು ತಮ್ಮ ದೇಃವನ್ನು ಕೆಎಲ್‌ಇಗೆ ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹರೀಶ್ ನಾಯ್ಕ

ನಿಧನದ ಬಗ್ಗೆ ಕಂಬನಿ ಮಿಡಿದಿರುವ ಸಿಐಟಿಯು ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್, “ಹರೀಶ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ಮುಂದಾಳು. ನಾಡಿನ ಕೆಲವೇ ಕೆಲವು ಹಿರಿಯ ಕಾರ್ಮಿಕ ಮುಂದಾಳುಗಳಲ್ಲಿ ಇವರೊಬ್ಬರು. ರೈತ ಕಾರ್ಮಿಕರ ಸಖ್ಯತೆಗೆ ಸದಾ ತುಡಿಯುತ್ತಿದ್ದ ಜೀವ, ಕವಿ, ವಾಗ್ಮಿಯು ಆಗಿದ್ದರು. ಸಾಮಾನ್ಯ ಕಾರ್ಮಿಕನಾಗಿ ಕಷ್ಟದ ಜೀವನ ಅರಿತವರು. ನಂತರ ಕಾರ್ಮಿಕ ಚಳುವಳಿಯಲ್ಲಿ ಕಾರ್ಯಕರ್ತರಾಗಿ ತೊಡಗಿ ನಾಯಕರಾದರು. ಅವರ ಅಗಲಿಕೆ ನಮಗೆ ತೀವ್ರ ದುಃಖವನ್ನು, ಚಳುವಳಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅವರಿಗೆ ನಮ್ಮೆಲ್ಲರ ಕೆಂಪು ನಮನಗಳು” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ನನ್ನ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *