ಬೆಂಗಳೂರು: ಅರ್ಕಾವತಿ ಬಡಾವಣೆ ನಿವೇಶನಗಳ ಮಾರಾಟ ವಿಚಾರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಹೈಕೋರ್ಟ್ ನಿಂದಿಸಿದೆ. ಸಾರ್ವಜನಿಕ ಸಂಸ್ಥೆಯಂತೆ ವರ್ತಿಸಿ, ಇದು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯಂತೆ ಅಲ್ಲ ಎಂದು ಕಿಡಿಕಾರಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತವಾಗಿರುವವರು ಪರ್ಯಾಯ ನಿವೇಶನಕ್ಕಾಗಿ ಕಾಯುತ್ತಿರುವುದರ ಮಧ್ಯೆಯೇ, ಪ್ರಾಧಿಕಾರ ಕೈಗೊಂಡಿರುವ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸೈಟ್ ಹರಾಜಿಗಿಂತ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿ. ನಿವೇಶನ ಮಂಜೂರಾದವರಿಗೆ ಸೈಟ್ ಒದಗಿಸಿ. ಅರ್ಕಾವತಿ ಬಡಾವಣೆಯಲ್ಲಿ ಹರಾಜಿಗೆ ಆದ್ಯತೆ ಸರಿಯಲ್ಲ. ಜೂ.7ರೊಳಗೆ ಬಿಡಿಎ ತನ್ನ ನಿಲುವು ತಿಳಸಬೇಕು ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಸೂಚನೆ ನೀಡಿದ್ದಾರೆ.
ಅರ್ಕಾವತಿ ಲೇಔಟ್ 7ನೇ ಬ್ಲಾಕ್‌ನಲ್ಲಿ ಬಿಡಿಎ ನಿವೇಶನ ಹೊಂದಿದ್ದ ಮಂಜುನಾಥ ರಾವ್, ಮಂಜುಳಾ ಆರ್.ಶೆಟ್ಟಿ ಮತ್ತು ಇಂದುಮತಿ ಬಾಬು ಶೇಖರ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿದೆ.
ಬಿಡಿಎ ಮೊದಲು ಸದ್ಯ ನಿವೇಶನ ಹಂಚಿಕೆ ವ್ಯಾಜ್ಯ ಪರಿಹರಿಸಲು ಸಹಾನುಭೂತಿ ಹೊಂದಿರಬೇಕು. ಹಂಚಿಕೆದಾರರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಪರಿಹಾರಕ್ಕಾಗಿ ಬಾಕಿ ಉಳಿದಿರುವಾಗ ಮತ್ತು ಆ ಹಂಚಿಕೆದಾರರು ಕಚೇರಿಯಿಂದ ಕಚೇರಿಗೆ ದಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗುತ್ತಿರುವಾಗ, ಬಿಡಿಎ ಮೊದಲು ನಿವೇಶನ ಹಂಚಿಕೆದಾರರಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವವರೆಗೆ ಮೂಲೆ ನಿವೇಶನಗಳನ್ನು ಹರಾಜು ಮಾಡಬಾರದು’’ ಎಂದು ನ್ಯಾಯಪೀಠ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಹರಾಜು ಹಾಕುವ ಬದಲು ನಿವೇಶನ ಹಂಚಿಕೆ ಮಾಡಬಹುದಾಗಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಅರ್ಜಿದಾರರಿಗೆ ನಿವೇಶನ ನೀಡುವ ಮುನ್ನ ಸದ್ಯ ನಿವೇಶನ ದೊರಕದಿರುವವರಿಗೆ ನಿವೇಶನ ಹಂಚಿಕೆ ಮಾಡುವ ಸಾಧ್ಯತೆಯನ್ನು ಬಿಡಿಎ ಪರಿಶೀಲಿಸಬೇಕಿದೆ ಎಂದರು.