ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ

ಬೆಂಗಳೂರು: ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ.

ಪಠ್ಯಪುಸ್ತಕ ಮರು ಪರೀಕ್ಷರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಸಿಡಿದೆದ್ದ ಅವರು, ರಾಷ್ಟ್ರಕವಿ ಕುವೆಂಪು ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದವರು. ಈ ಹಿನ್ನೆಲೆಯಲ್ಲಿ ಸರ್ಕಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು ಪ್ರಾರಂಭಿಸಿತ್ತು. ಅಷ್ಟೇ ಅಲ್ಲದೇ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಕುವೆಂಪು ಹಾಗೂ ಅವರ ಜನಾಂಗವನ್ನು ಅವಾಚ್ಯ ಶಬ್ದದಿಂದ ನಿಂದಿಸಿ, ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಲೇವಡಿ ಮಾಡಿರುವ ರೋಹಿತ್‌ ಚಕ್ರತೀರ್ಥ ವಿರುದ್ಧ ಕ್ರಮಕೈಗೊಂಡಿಲ್ಲ. ಬದಲಾಗಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಪ್ರಕಟಿಸಿ ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ ಕರ್ನಾಟಕಕ್ಕೂ ಮಹಾಕವಿ ಕುವೆಂಪು ಅವರು ಗೌರವ ತಂದರು. ಇಂತಹವರನ್ನು ನಿಂದಿಸಿರುವುದು ಅಪಾಯಕಾರಿ ಬೆಳವಣಿಗೆ ಆಗಿದೆ ಎಂದು ಕಿಡಿಕಾರಿದರು.

ʻʻಕುವೆಂಪು ಅವರನ್ನು ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ರಾಷ್ಟ್ರಗೀತೆಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳುವ ಬದಲು ಸರ್ಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದು ಅಪಾಯಕಾರಿಯಾದ ಬೆಳವಣಿಗೆ. ಇದರಿಂದ – ʻʻಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಕಾಶಗಳಿವೆʼʼ – ಎಂಬ ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ. ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ನಮ್ಮ ಸರಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆʼʼ ಎಂದು ಬರೆದಿದ್ದಾರೆ.

ರಾಷ್ಟ್ರಗೀತೆ, ನಾಡಗೀತೆ, ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿರುವುದು ಕಷ್ಟ. ಈ ಹಿನ್ನೆಲೆಯಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *