ಕುವೆಂಪು ಅಂದ್ರೆ ಕನ್ನಡ – ಬಸವಣ್ಣ ಅಂದ್ರೆ ಕರ್ನಾಟಕ :ಈಗ ಅವರಿಬ್ಬರಿಗೂ ಅವಮಾನವಾಗಿದೆ, ಸುಮ್ಮನಿರಲು ಸಾಧ್ಯವೆ?

ತೀರ್ಥಹಳ್ಳಿ : ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಹಲವು ಮಹನೀಯರಿಗೆ ಅಪಮಾನ ಮಾಡಿದೆ. ಹೀಗಾಗಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಇಂದು ತೀರ್ಥಹಳ್ಳಿ ತಾಲ್ಲೂಕಿನ ಕವಿಶೈಲದಿಂದ ಪಾದಯಾತ್ರೆ ಆರಂಭಿಸಲಾಗಿದೆ.

ಈ ಪಾದಯಾತ್ರೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕುವೆಂಪು ಅಂದ್ರೆ ಕನ್ನಡ, ಬಸವಣ್ಣ ಅಂದ್ರೆ ಕರ್ನಾಟಕ. ಈಗ ಅವರುಗಳಿಗೇ ಕುತ್ತು ಬಂದಿದೆ ಅಂದಮೇಲೆ ನಾವಿದ್ದು ಮಾಡುವುದೇನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಈ ಹಿಂದೆ ಗೋಕಾಕ್ ಚಳುವಳಿ ನಡೆದಿತ್ತು. ಈಗ ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ ಎಂದ ಹಂಸಲೇಖ, ಇದು ನಾಡಿನಾದ್ಯಂತ ಮೊಳಗಬೇಕಿದೆ. ನಮ್ಮ ನಾಡು, ನಾಡಗೀತೆ ಎರಡಕ್ಕೂ ಅವಮಾನವಾಗಿದೆ. ಹೀಗಾಗಿ ಇದರ ವಿರುದ್ಧ ನಿರಂತರ ಹೋರಾಟ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿಸಿ ಜೂನ್‌ 18 ಕ್ಕೆ ಬೃಹತ್‌ ಪ್ರತಿಭಟನೆ

ಇಂದು (ಬುಧವಾರ) ಬೆಳಿಗ್ಗೆ 7 ಗಂಟೆಗೆ ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗಿದೆ.  ಒಟ್ಟು 20 ಕಿ.ಮೀ.ಗಳ ಪಾದಯಾತ್ರೆ ನಡೆಯಲಿದ್ದು,  ಮಧ್ಯಾಹ್ನದ ನಂತರ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಆವರಣದಲ್ಲಿ ಸಾರ್ವಜನಿಕ ಸಭೆ ಜರಗಲಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.

ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ನಾಗರೀಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಪಕ್ಷಾತೀತವಾಗಿ ಈ ಹೋರಾಟವನ್ನು ರೂಪಿಸಲಾಗಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಿರಿಯ ಚಿಂತಕರಾದ ಎಸ್.ಜಿ. ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ್, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯಾರ್ಥಿ- ಯುವಜನ- ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಪಾದಯಾತ್ರೆಯಲ್ಲಿ ಭಾಗವಹಿಸಿವೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

Donate Janashakthi Media

Leave a Reply

Your email address will not be published. Required fields are marked *