ನವದೆಹಲಿ : ಕುಸ್ತಿ ಫೆಡರೇಷನ್ ಮುಖ್ಯಸ್ಥ, ಸಂಸದ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಇಂದು ಸಂಸತ್ ಭವನದ ಕಡೆಗೆ ಮೆರವಣಿಗೆ ಮಾಡಲು ಪ್ರಯತ್ನಿಸಿದ್ದಕ್ಕೆ ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ.
ಮೆರವಣಿಗೆ ತಡೆದ ಪೊಲೀಸರು, ಪ್ರತಿಭಟನೆಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಲ್ಲಿ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಪೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮುಂತಾದವರು ಸೇರಿದ್ದಾರೆ.
ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದು ತಂದ ಚಾಂಪಿಯನ್‌ಗಳನ್ನು ಪೊಲೀಸರು ತಳ್ಳಾಡಿದರು, ಎಳೆದಾಡಿದರು, ಹಾಗೂ ಬಸ್‌ಗಳ ಒಳಗೆ ನೂಕಲಾಯಿತು. ಆರೋಪಿಯನ್ನು ಸಂಸತ್ತಿನೊಳಗೆ ಬಿಟ್ಟು, ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು.
ಏಪ್ರಿಲ್ 23ರಿಂದಲೂ ಇಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾರೆ. ಅವರ ಮನವಿಯನ್ನು ಸ್ವಿಕರಿಸಿ, ತನಿಖೆ ನಡೆಸುವ ಹಾಗೂ ಬ್ರಿಜ್ ಭೂಷಣ್ ರವರ ಮೇಲೆ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಹಿಂದೇಟಾಕುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಂದಿನ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಗೆ ರೈತ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಬೆಂಬಲವನ್ನು ನೀಡಿದ್ದರು.
ತಳ್ಳಾಟ – ನೂಕಾಟ: ಇದಕ್ಕೂ ಮುನ್ನ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಮತ್ತು ಸಾಕ್ಷಿ ಮಲಿಕ್ ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಸಾಗಲು ಪ್ರಯತ್ನಿಸಿದರು. ಆಗ ಕುಸ್ತಿಪಟುಗಳು ಮತ್ತು ಪೊಲೀಸ್ ಅಧಿಕಾರಿಗಳು ನಡುವೆ ಪರಸ್ಪರ ತಳ್ಳಾಟ, ನೂಕಾಟ ಉಂಟಾಗಿ ಜಂತರ್ ಮಂತರ್‌ನಲ್ಲಿ ಅಸಹಜ ಸ್ಥಿತಿ ಉಂಟಾದ ದೃಶ್ಯಗಳು ಕಂಡುಬಂದವು. ಇದೇ ಸಂದರ್ಭದಲ್ಲಿ ವಿನೇಶ್ ಫೋಗಟ್ ತಮ್ಮ ಬಂಧನವನ್ನು ಬಲವಾಗಿ ಪ್ರತಿರೋಧಿಸಲು ಯತ್ನಿಸಿದರು. ಸಂಗೀತಾ ಹಾಗೂ ವಿನೇಶ್ ರಸ್ತೆ ಮೇಲೆಯೇ ಮಲಗಿದರು. ಆಗ ಪೋಲೀಸ್ ಅಧಿಕಾರಿಗಳು ಕುಸ್ತಿಪಟುಗಳು ಮತ್ತವರ ಬೆಂಬಲಿಗರನ್ನು ಎಳೆದು ಬಸ್‌ಗಳಿಗೆ ಏರಿಸಿದರು.
ಪೊಲೀಸರು ಬಂಧಿಸಿ ಬಸ್ ಹತ್ತಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದ ವಿನೇಶ್ ಫೋಗಟ್, ನ್ಯಾಯಕ್ಕಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಶಿಕ್ಷೆ ಅನುಭವಿಸುತ್ತಿದ್ದೇವೆ. ಆರೋಪಿಯು ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಆತನಿಗೆ ಸರ್ಕಾರವು ಆಶ್ರಯ ನೀಡುತ್ತಿದೆ. ದೇಶಕ್ಕಾಗಿ ಪದಕಗಳನ್ನು ಗೆದ್ದ ನಮ್ಮನ್ನು ಈಗ ಜೈಲಿಗೆ ಹಾಕಲಾಗುತ್ತಿದೆ ಎಂದು ದೂರಿದರು. ಬಜರಂಗ್ ಮತ್ತು ವಿನೇಶ್ ಇತರರನ್ನು ಬಂಧಿಸುವಾಗ ಬ್ರಿಜ್ ಭೂಷಣ್ ಅವರ ಅಧಿಕೃತ ನಿವಾಸ ಕೇವಲ ಕೇವಲ ಮೀಟರ್ ದೂರದಲ್ಲಿತ್ತು.
ಮಂತ್ರ ಘೋಷಗಳ ಅಬ್ಬರದಲ್ಲಿ
ಕೇಳಲಿಲ್ಲ ನೋವಿನ ಕೂಗು
ಒಳಗೆ ಮಂತ್ರ ಘೋಷಣೆ
ಹೊರಗೆ ಅನ್ಯಾಯದ ವಿರುದ್ಧ ಘೋಷಣೆ
ಒಳಗೆ ಪ್ರಜಾಪ್ರಭುತ್ವ ದೇಗುಲ ಉದ್ಘಾಟನೆ!
ಹೊರಗೆ ಆಪಾದಿತನ ವಿರುದ್ಧ ಉದ್ಘೋಷಣೆ
ಒಳಗೆ ಹೋಮದ ಹೊಗೆ
ಹೊರಗೆ ಎದ್ದಿಹುದು ಧೂಳು
ಒಳಗೆ ಮೊಳಗಿಹುದು ಓಂಕಾರ
ಹೊರಗೆ ಒಡಲುರಿಯ ಚೀತ್ಕಾರ
ಒಳಗಿನ ದೃಶ್ಯ ನೋಡುತಿದೆ ದೇಶ
ಹೊರಗಿನ ದೃಶ್ಯ ನೋಡುತ್ತಿದೆ ವಿಶ್ವ
ಜಾಣ ಕಿವುಡಿಗೆ ಜಾರಿದ ವಿಶ್ವ ಜಾಣ
ಎಬ್ಬಿಸಲು ನಿಂತಿಹುದು ಜಾಲತಾಣ
– ದಯಾನಂದ ಮೂರ್ತಿ ಕುಕ್ಕರಹಳ್ಳಿ
೨೮-೦೫-೨೦೨೩