ಕುರಿ ಕಾಯೋ ತೋಳ ಸಂಬಳ ಬೇಡ ಎಂದಂತೆ ಸರ್ಕಾರದ ವರ್ತನೆ: ಸಿದ್ದರಾಮಯ್ಯ ಟೀಕೆ

ಚಿಕ್ಕಮಗಳೂರು: ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಹಿಡಿದು ಅಧಿಕಾರಿಗಳವರೆಗೂ ಶೇಕಡಾ 40ರಷ್ಟು  ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಆರೋಪ ಪ್ರಕರಣ ತನಿಖೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರಿ ಕಾಯೋ ತೋಳ ತನಗೆ ಸಂಬಳ ಬೇಡ ಎಂದಂತೆ ಅಧಿಕಾರಿಗಳ ಮೂಲಕ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದು ಟೀಕಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ʻʻರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಆಯೋಗ ರಚಿಸಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ, ಆ ಬಗ್ಗೆ ಕೂಡ ತನಿಖೆ ನಡೆಸಲಿ. ಆದರೆ ಸರ್ಕಾರಕ್ಕೆ ಧಮ್ ಇಲ್ಲ. ಕುರಿ ಕಾಯೋ ತೋಳ ಸಂಬಳ ಬೇಡ ಎಂದಂತೆ ಅಧಿಕಾರಿಗಳ ಮೂಲಕ ತನಿಖೆಗೆ ಆದೇಶಿಸಲಾಗಿದೆ ಎಂದು ಕುಟುಕಿದ್ದಾರೆ.

ಬಿಜೆಪಿಯವರು ಜನ ಸ್ವರಾಜ್ಯ ಯಾತ್ರೆ ಆರಂಭಿಸಿದ್ದಾರೆ.‌ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಕಿ ಇದ್ದರೂ ಅವರು ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡಲಿಲ್ಲ. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಆ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನೂ ಮಾಡಲಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಿದ್ದರೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಮುಂದೂಡುತ್ತಿರಲಿಲ್ಲ. ಚುನಾವಣೆ ಮುಂದೂಡಲು ಒಂದು ಕಾನೂನು ಬೇರೆ ತಂದಿದ್ದಾರೆ. ಚುನಾವಣೆ ನಡೆಸುವ ವಿಚಾರದಲ್ಲಿ ಬಿಜೆಪಿಯವರಿಗೆ ಬದ್ಧತೆ ಇಲ್ಲ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳಾದರೂ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಶಕ್ತಿ ತುಂಬಲಿಲ್ಲ. ಯಾವುದೇ ಕಾರ್ಯಕ್ರಮವ ರೂಪಿಸಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿರುವ ಬಿಜೆಪಿಯವರಿಗೆ ಜನ ಸ್ವರಾಜ್ಯ ಯಾತ್ರೆ ನಡೆಸಲು ನೈತಿಕ ಹಕ್ಕಿಲ್ಲ. ಪಂಚಾಯತ್‌ ರಾಜ್ ವ್ಯವಸ್ಥೆ, ಸಾಮಾಜಿಕ ನ್ಯಾಯದ ಬಗ್ಗೆ ಒಂದು ದಿನವೂ ಬಿಜೆಪಿ ನಾಯಕರು ಮಾತಾಡಿಲ್ಲ. ಅವರಿಗೆ ಆ ಕುರಿತು ಬದ್ಧತೆಯೇ ಇಲ್ಲ. ಇಂಥವರು ಗೆದ್ದು ಬಂದರೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಏನೂ ಕೆಲಸ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಿಂದ ಕಳೆದ ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಹೋದ ಪ್ರಾಣೇಶ್ ಒಂದು ದಿನವೂ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಮಾತಾಡಿಲ್ಲ. ಯಾವುದೇ ಪಂಚಾಯತಿಗೆ ಹೋಗಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ಕೊಟ್ಟಿದ್ದರೆ ಅದು ಕಾಂಗ್ರೆಸ್. ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದರು. ನರಸಿಂಹರಾವ್ ಅವರು ಅದನ್ನು ಜಾರಿಗೊಳಿಸಿದರು ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಕೊಟ್ಟಿದ್ದರೆ ಸಿ.ಟಿ.ರವಿ ಹೇಳಲಿ. ನಮ್ಮ ಅವಧಿಯಲ್ಲಿ‌ ಮಂಜೂರಾದ ಮನೆಗಳಿಗೆ ಎರಡನೇ ಕಂತಿನ ಅನುಸಾನ ಕೊಡದೆ ಲಾಕ್ ಮಾಡಿದರು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ವಿಚಾರದಲ್ಲಿ ಮೋದಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ಸತ್ಯ ಹೇಳಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆದ ಹೋರಾಟದಲ್ಲಿ 700 ರೈತರು ಸತ್ತರು. ಇದಕ್ಕೆ ಯಾರು ಜವಾಬ್ದಾರಿ? ಕಾಯಿದೆ ಜಾರಿಗೆ ತರದೇ ಹೋಗಿದ್ದರೆ ರೈತರು ಹೋರಾಟ ನಡೆಸಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ರೈತರ ಸಾವಿಗೆ ಕೇಂದ್ರ ಸರ್ಕಾರ, ಮೋದಿ ಜವಾಬ್ದಾರಿ. ಐದು ರಾಜ್ಯಗಳ ಚುನಾವಣೆಯಲ್ಲಿ ಸೋತ ಬಳಿಕ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯ ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಸೋಲುವ ಭಯದಿಂದ. ಚರ್ಚೆ ಇಲ್ಲದೆ ಸಂಸತ್ತಿನಲ್ಲಿ ಕಾಯಿದೆ ವಾಪಸ್ ಪಡೆದಿದ್ದಾರೆ. ಬಿಜೆಪಿ ರೈತ ಮತ್ತು ಜನ ವಿರೋಧಿ ಪಕ್ಷ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಕೇಳಲು ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.

ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಹಾಳಾಗಿವೆ. ಈವರೆಗೆ ಒಂದು ಗುಂಡಿ ಮುಚ್ವಿಲ್ಲ, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಈವರೆಗೆ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗಾಯತ್ರಿ ಶಾಂತೇಗೌಡರ ಗೆಲುವು ಖಚಿತ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *