ಮಹಿಳಾ ವಿರೋಧಿ ಹೇಳಿಕೆ : ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಗೆ ಜನವಾದಿ ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು : ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಗ್ಯಾರಂಟಿ ಯೋಜನೆಯಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ನಾಲಿಗೆಯನ್ನು ಹರಿಬಿಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರಿಗೆ ಮಹಿಳೆಯರ ಕುರಿತು ಕನಿಷ್ಟ ಗೌರವ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ರಾಜ್ಯಾಧ್ಯಕ್ಷರಾದ ಡಾ. ಮೀನಕ್ಷಿ ಬಾಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದು, ಭಾರತದ ಸಂದರ್ಭದಲ್ಲಿ ಮಹಿಳೆಯರ ನಡೆ ನುಡಿಗಳನ್ನು ಅವರ ನಡತೆಗೆ ಹೋಲಿಸುವ ಮನೋಭಾವ ಇಂದಿಗೂ ಪ್ರಚಲಿತವಿದೆ. ಅಂತಹದೇ ಮನಃಸ್ಥಿತಿಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹೊಂದಿರುವುದು ಅವರು ರಾಜಕೀಯ ಅನುಕೂಲಕ್ಕಾಗಿ
ಬಿ.ಜೆ‌. ಪಿ.ಯ ಜೊತೆ ಸಖ್ಯ ಬೆಳೆಸಿದ್ದಷ್ಟೇ ಅಲ್ಲ ಬದಲಿಗೆ ಆಳದಲ್ಲಿ ಅವರು ಮನುವಾದದ ಸಮರ್ಥಕರು ಎಂದು ಸ್ಪಷ್ಟವಾಗುತ್ತದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿಮಂಡ್ಯ : “ಗೋ ಬ್ಯಾಕ್ ಕುಮಾರಸ್ವಾಮಿ” ಮಹಿಳೆಯರ ಪ್ರತಿಭಟನೆ

ಕುಮಾರಸ್ವಾಮಿಯವರು ರಾಜ್ಯದ ಮಹಿಳೆಯರ ಮತ್ತು ಮಹಿಳೆಯರ ಬಗ್ಗೆ ಗೌರವ ಹೊಂದಿರುವ ಎಲ್ಲರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಈಗ ಭೀಕರ ಬರಗಾಲವಿದೆ. ಕೋವಿಡ್ ಹೊಡೆತದಿಂದ ಇನ್ನೂ ಜನ ಹೊರ ಬಂದಿಲ್ಲ. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಅಲ್ಪ ಸ್ವಲ್ಪ ಆಸರೆಯಾಗಿದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದವರು ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಗಳಾಗಿದ್ದವರು ಎಂಬುದು ನಾವೆಲ್ಲ ಯೋಚಿಸಬೇಕಾದ ಸಂಗತಿ ಎಂದಿದ್ದಾರೆ.

ಈ ಕಾರಣದಿಂದಲೇ ರಾಜ್ಯದ ಮಹಿಳೆಯರು ಮತ ಹಾಕುವ ಮುನ್ನ ಯೋಚಿಸಬೇಕು. ಮಹಿಳೆಯರ ಕುರಿತು ಇಷ್ಟು ಲಘು ಧೋರಣೆ ಹೊಂದಿರುವ, ಮಹಿಳೆಯರ ಕಷ್ಟಕ್ಕೆ ಸಿಕ್ಕ ಕನಿಷ್ಟ ಆಸರೆಯನ್ನೇ ಮೂದಲಿಸಿ, ಮಹಿಳೆಯರ ಬಗ್ಗೆ ಕೀಳು ಮನೋಭಾವ ಸೂಚಿಸುವ ಮಾತುಗಳನ್ನು ಆಡಿದ
ಕುಮಾರಸ್ವಾಮಿ ಯವರ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಮತ್ತು ಅವರು ಬೆಂಬಲಿಸುವ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಕಾರಣಕ್ಕೆ ಮತ ಹಾಕಬಾರದು ಎಂದು ರಾಜ್ಯದ ಜನರನ್ನು ಮನವಿ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *