ಕೂಲಿ ಕೆಲಸ – ನಿರುದ್ಯೋಗ ಭತ್ಯೆ ನೀಡಬೇಕೆಂದು ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಗಜೇಂದ್ರಗಢ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆಯಡಿ ನಿರುದ್ಯೋಗ ಭತ್ಯೆ ಹಾಗೂ ನಿರಂತರ ಕೂಲಿ ಕೆಲಸ ಕೊಡಬೇಕೆಂದು ಆಗ್ರಹಿಸಿ ಕೂಲಿಕಾರರು ಗಜೇಂದ್ರಗಢ ತಹಶೀಲ್ದಾರ ಕಛೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯೂ)ದ ಗಜೇಂದ್ರಗಡ ಹಾಗೂ ಸೂಡಿ ಮತ್ತು ರಾಜೂರ ಘಟಕಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕು ಸಮಿತಿ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ನವೆಂಬರ್‌ 14ರಂದು ಸೂಡಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಎಲ್ಲಾ ಕೂಲಿಕಾರರು ಸೇರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನಮೂನೆ-6 ರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಒಂದು ತಿಂಗಳು ಕಳೆದರೂ ಉದ್ಯೋಗ ಹಾಗೂ ನಿರುದ್ಯೋಗ ಭತ್ಯೆ ನೀಡಲಿಲ್ಲ. ಇವನ್ನು ಕೊಡಬೇಕೆಂದು ಸೂಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರುಗಡೆ ಧರಣಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೂಲಿಕಾರರ ಮಹಿಳೆಯರನ್ನು ಬೀದಿಗೆ ತಳ್ಳುವ ಮೂಲಕ ಆಡಳಿತ ವ್ಯವಸ್ಥೆ ತನ್ನ ವಿಫಲತೆಯನ್ನು ಎತ್ತಿ ತೋರಿಸಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೂಲಿಕಾರ್ಮಿಕರ ಸಮಸ್ಯೆ ಆಲಿಸಿದ ಬೃಂದಾ ಕಾರಟ್‌

ಸೂಡಿ ಗ್ರಾಮ ಘಟಕದ ಕಾರ್ಯದರ್ಶಿ ಶರಣಮ್ಮ ಲೆಕ್ಕಿಗಿಡದ ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಅರ್ಜಿ ಸ್ವೀಕರಿಸಲು ನಿರಂತರವಾಗಿ ಒಬ್ಬರನ್ನು ನೇಮಕ ಮಾಡಬೇಕು. ಯಾವುದೇ ರೀತಿಯ ಅರ್ಜಿ ಪಡೆಯುವಲ್ಲಿ ನಿರಾಕರಿಸಬಾರದು ಹಾಗೂ ನಮೂನೆ-6 ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯಾಗಿ ಕೆಲಸ ನೀಡಬೇಕು. ಯಾವುದೇ ರೀತಿಯ ಜಾತಿ ತಾರತಮ್ಯ ಇಲ್ಲದೇ ಕೂಲಿ ಬಯಸಿದವರಿಗೆ ಕೂಲಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯಕ್ಕೆ ಕೊಡಬೇಕಾದ 125 ಕೋಟಿ ರೂಪಾಯಿ ತಕ್ಷಣ ಬಿಡುಗಡೆ ಮಾಡಿ ಕೂಲಿಕಾರರಿಗೆ ಕನಿಷ್ಟ ರೂ.600/- ಕೂಲಿ ಕೊಡಲು ಮುಂದಾಗಬೇಕು. ರಾಜ್ಯ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಗೆ ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಗ್ರಾಮ ತಾಲೂಕುಗಳ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ: ನರೇಗಾ ಯೋಜನೆಯಲ್ಲಿ ಅವೈಜ್ಞಾನಿಕ ಹೊಸ ನೀತಿ ವಿರೋಧಿಸಿ ಕೂಲಿಕಾರರ ಪ್ರತಿಭಟನೆ

ಪ್ರತಿಭಟನೆಯಲ್ಲಿ ಚಂದ್ರು ರಾಠೋಡ, ಯಮನವ್ವ ದೊಡ್ಡಮನಿ, ಉಮಾ ಬಡಿಗೇರ, ಶಶಿಕಲಾ ಅಂಗಡಿ, ರವಿ ಗುಳೇದಗುಡ್ಡ, ಮಮತಾಜಬೇಗಂ, ಮಂಜುನಾಥ ಪೂಜಾರ, ಗೀತಾ ಮಾದರ, ಪಾರವ್ವ ಮಾದರ, ಶಾಂತವ್ವ ಪಟ್ಟಣಶೆಟ್ಟಿ, ದುರಗವ್ವ ಮಾದರ, ಹುಲಿಗೆಮ್ಮ ಮಾತಿನವರ, ಯಲ್ಲಮ್ಮ ಮಂಡಳಮನಿ, ದುರಗವ್ವ ಮುಂದಿನಮನಿ, ಕಳಕವ್ವ ಹಿರೇಮನಿ, ಭರಮವ್ವ ಮಾತಿನ, ಕಾಳಪ್ಪ ರಾಠೋಡ, ಅಕ್ಕಮ್ಮ ಅಂಬರಗಟ್ಟಿ, ಸವಿತಾ ನರಗುಂದ ಹಾಗೂ ನೂರಾರು ಜನ ಕೂಲಿಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಅಧಿಕಾರಿಗಳೊಂದಿಗೆ ಸಭೆ

ಉಪತಹಶೀಲ್ದಾರ ಅಡಗತ್ತಿಯವರ ನೇತೃತ್ವದಲ್ಲಿ ಸಹಾಯಕ ತಾಲೂಕು ಪಂಚಾಯತ ಅಧಿಕಾರಿಗಳು ಹಾಗೂ ರಾಜೂರ ಮತ್ತು ಸೂಡಿ ಅಭಿವೃದ್ದಿ ಅಧಿಕಾರಿಗಳ ಮಧ್ಯೆ ಸಭೆ ನಡೆಯಿತು. ಈ ವೇಳೆ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ಹಾಗೂ ನಿರಂತರ ಕೂಲಿ ಕೆಲಸ ಕೊಡಲಾಗುವುದು ಎಂದು ಲಿಖಿತ ಭರವಸೆ ಮೇರೆಗೆ ಹೋರಾಟವನ್ನು ಹಿಂಪಡೆದುಕೊಂಡರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ಭರವಸೆ ನೀಡಿದ ಹೊರತಾಗಿಯೂ ಕೃಷಿ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ನಿರಂತರ ಕೆಲಸ ಕೊಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟಕರು ಎಚ್ಚರಿಸಿದರು.

Donate Janashakthi Media

Leave a Reply

Your email address will not be published. Required fields are marked *