ಬೆಂಗಳೂರು : ಕುಕ್ಕುಟೋದ್ಯಮದಲ್ಲಿ ಸಣ್ಣ ಪ್ರಮಾಣದ ಕೋಳಿ ಸಾಕಣೆದಾರರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸುವಂತೆ ರಾಜ್ಯ ಸರಕಾರದ ಗಮನ ಸೆಳೆಯುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಶಾಸಕರ ಭವನದಲ್ಲಿಂದು ಕೋಳಿ ಸಾಕಣೆದಾರರ ಸಮಸ್ಯೆಗಳ ಕುರಿತಾದ ರಾಜ್ಯದ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ‘ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಬಲೀಕರಣ ಹಾಗೂ ನಿರುದ್ಯೋಗವನ್ನು ಹತ್ತಿಕ್ಕುವ ಶಕ್ತಿಯುಳ್ಳ ಕೋಳಿ ಸಾಕಣೆಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.
ಸದ್ಯಕ್ಕೆ ಕುಕ್ಕುಟೋದ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನ್ಯಾಯಯುತ ಬೆಲೆಯಲ್ಲೂ ಸಾಕಣೆದಾರರಿಗೆ ಅನ್ಯಾಯವಾಗುತ್ತಿದೆ. ರೈತರು ಮತ್ತು ಕಂಪನಿಗಳ ನಡುವೆ ಆಗಿರುವ ಒಪ್ಪಂದದಂತೆ ಸಕಾಲಕ್ಕೆ ರೈತರಿಗೆ ಕೋಳಿ ಮರಿಗಳನ್ನು ನೀಡಬೇಕು, ಸರಕಾರ ನಿಗದಿ ಮಾಡಿರುವ ಕನಿಷ್ಟ ಸಾಕಣೆ ದರ ನೀಡುವುದು, ಕೋಳಿ ಸಾಕಣೆಯನ್ನು ಕೃಷಿ ಎಂದು ಸರಕಾರ ಘೋಷಣೆ ಮಾಡಬೇಕು, ರಾಜ್ಯದ ಕುಕ್ಕುಟ ಮಹಾಮಂಡಳಿಯನ್ನು ಕೆಎಂಎಫ್ ಮಾದರಿಯಲ್ಲಿ ಬಲಪಡಿಸುವುದು ಸೇರಿದಂತೆ ನಿಮ್ಮ ಹಲವಾರು ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತನಾಡುವುದಾಗಿ ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.
ಮಾಜಿ ಸಚಿವ, ಶಾಸಕ ರಮೇಶ್ ಕುಮಾರ್ ಮಾತನಾಡಿ, ರಾಜಕಾರಣಿಗಳಿಗೆ ಮರೆವು ಜಾಸ್ತಿ, ಸರಕಾರ ಕುಕ್ಕುಟೋದ್ಯಮವನ್ನು ನಿರ್ಲಕ್ಷಿಸುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆದಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರಿಗೆ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರೋತ್ಸಾಹಕ್ಕಾಗಿ ನೀಡಲಾಗುತ್ತಿದ್ದ ಬ್ಯಾಂಕ್ ಸಾಲಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಟ್ಯಾಂತರ ರೂ ಮೋಸ ಮಾಡಿ ಬ್ಯಾಂಕುಗಳಿಗೆ ವಂಚಿಸದವರ ಮೇಲೆ ಸರಕಾರಕ್ಕೆ ನಂಬಿಕೆ ಇದೆ. ಕೇವಲ ಸಾವಿರಾರು ರೂ ಪಡೆದು ಪ್ರಮಾಣಿಕವಾಗಿ ಸಾಲ ಹಿಂದಿರುಗಿಸುವ ರೈತರ ಮೇಲೆ ಭರವಸೆ ಇಲ್ಲ ಇದು ಬದಲಾಗಬೇಕು ಎಂದರು. ಕುಕ್ಕುಟೋಧ್ಯಮವನ್ನು ಕೃಷಿ ಎಂದು ಘೋಷಿಸುವಂತೆ ಸರಕಾರದ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕಿ ರೂಪಾ ಶಶಿಧರ್, ಶಾಸಕ ನಂಜೇಗೌಡ, ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಕಾಂತರಾಜ್, ರಾಜ್ಯ ಕೋಳಿ ಸಾಕಣೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಅಧ್ಯಕ್ಷ ಜೆ.ಸಿ.ಮಂಜುನಾಥ್ ಪ್ರಧಾನ ಕಾರ್ಯದರ್ಶಿ ಸಿ.ಎಂ. ರಮೇಶ್ ಮುಂತಾದವರು ಮಾತನಾಡಿದರು.