KSRTC ಆರಂಭಿಸಿದ್ದು ನಾವೆ ಮೊದಲು ಎಂದು ವಾದ ಮಂಡಿಸಿದ್ದ ಕೇರಳ ಸಾರಿಗೆಗೆ ಜಯ
ಬೆಂಗಳೂರು: ಕರ್ನಾಟಕ ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಅಂತ ಬಳಸುವಂತಿಲ್ಲ. ಕೇರಳ ಮಾತ್ರ ಕೆಎಸ್‌ಆರ್‌ಟಿಸಿ ಪದ ಬಳಸಬೇಕು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ(ಟ್ರೇಡ್ ಮಾರ್ಕ್ ರಿಜಿಸ್ಟ್ರಿ) ಅಂತಿಮ ತೀರ್ಪು ನೀಡಿದೆ.
ಕರ್ನಾಟಕ ಮತ್ತು ಕೇರಳ ನಡುವೆ ಹಲವು ವರ್ಷಗಳಿಂದಲೂ ಕೆಎಸ್‌ಆರ್‌ಟಿಸಿಗಾಗಿ ಕಾನೂನು ಸಮರ ನಡೆಸುತ್ತಾ ಬಂದಿದ್ದು ಇದೀಗ ಇದಕ್ಕೆ ಬ್ರೇಕ್ ಬಿದ್ದಿದೆ. ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್ ಟಿಸಿ ಎಂದು ಬಳಸಬೇಕು ಎಂದಿದೆ. ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂಬ ಹೆಸರು ಹಾಗೂ ಲೋಗೋ ಕರ್ನಾಟಕದಿಂದ ಕೈ ತಪ್ಪಲಿದೆ.
ಏನಿದು ವಿವಾದ? : ಕರ್ನಾಟಕ ಮತ್ತು ಕೇರಳದ ನಡುವೆ 1994ರಿಂದಲೇ ವಿವಾದ ಶುರುವಾಗಿತ್ತು. ಕೇರಳವೂ ತನ್ನ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್ ಟಿಸಿ ಎಂದು ಕರೆಯುವುದಕ್ಕೆ ಕರ್ನಾಟಕ ಕೇರಳಕ್ಕೆ ನೋಟಿಸ್ ನೀಡಿತ್ತು. ಆದರೆ ಕೇರಳ ನಮ್ಮ ಬಳಿ ಟ್ರೇಡ್ ಮಾರ್ಕ್ ಇದೆ ಎಂದು ವಾದ ಮುಂದಿಟ್ಟಿತ್ತು. ಇದಾದ ಮೇಲೆ ಕೇರಳ ರಿಜಿಸ್ಟ್ರಿ ಬಾಗಿಲು ತಟ್ಟಿ ತಾವೇ ಕೆಎಸ್‌ಆರ್ ಟಿಸಿ ಮೊದಲು ಬಳಸಿದ್ದು ಎಂದು ಹಕ್ಕು ಮಂಡನೆ ಮಾಡಿತ್ತು.
27 ವರ್ಷದ ಕಾನೂನು ಸಮರ ಈಗ ಅಂತ್ಯವಾಗಿದೆ. ಮೈಸೂರು ರಾಜ್ಯ ಕರ್ನಾಟಕವಾದ ನಂತರ ಕರ್ನಾಟಕ ಕೆಎಸ್ ಆರ್ ಟಿಸಿ ಎಂದು ಬಳಸುತ್ತಿದ್ದರೆ ನಾವು ಮೊದಲಿನಿಂದಲೂ ಬಳಸುತ್ತಿದ್ದೇವೆ ಎಂದು ವಾದ ಮುಂದಿಟ್ಟಿತ್ತು.
ಕರ್ನಾಟಕದಲ್ಲಿ 1948 ರಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಎಂಜಿಆರ್ ಟಿಡಿ ಎಂದು ಕರೆಯಲಾಗಿತ್ತು. ಅಂದರೆ ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ ಎಂಬ ಹೆಸರು ಇತ್ತು. 1973 ರಲ್ಲಿ ಮೈಸೂರು ಕರ್ನಾಟಕವಾದ ನಂತರ ಕೆಎಸ್ ಆರ್‌ಟಿಸಿ ಎಂದು ಬಳಕೆ ಆರಂಭವಾಯಿತು.
ಕೇರಳದಲ್ಲಿ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ) ಎಂದು ಕರೆಯಲಾಗುತ್ತಿತ್ತು. 1965 ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಯಿತು. ಇದನ್ನೆ ಆಧಾರವಾಗಿಟ್ಟುಕೊಂಡು ಕೇರಳ ವಾದ ಮಂಡಿಸಿ ಗೆಲುವು ಸಾಧಿಸಿದೆ.
ಕೆಎಸ್‌ಆರ್‌ಟಿಸಿ ಟ್ರೇಡ್ಮಾರ್ಕ್ ಕೇರಳ ಪಾಲಾದ ವಿಚಾರವಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸದ್ಯ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಆದರೆ, ನಮಗೆ ಯಾವುದೇ ರೀತಿಯ ಅಧಿಕೃತ ಆದೇಶ ಬಂದಿಲ್ಲ. ಅಧಿಕೃತ ಆದೇಶ ಕೈಸೇರಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಕಾನೂನು ಹೋರಾಟದ ಬಗ್ಗೆ ಮುಂದೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ಟ್ರೇಡ್ ಮಾರ್ಕ್ಗಳ ರಿಜಿಸ್ಟ್ರಾರ್ ಚೆನ್ನೈನಲ್ಲಿದೆ. ಈ ಟ್ರೇಡ್ಮಾರ್ಕ್ ವಿವಾದ 6-7 ವರ್ಷದಿಂದ ನಡೀತಿದೆ. ನಾವು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಟಿವಿ9ಗೆ KSRTC ಎಂಡಿ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ಧಾರೆ. ಟ್ರೇಡ್ ಮಾರ್ಕ್ ರಿಜಿಸ್ಟರಿ ನೀಡಿರುವ ತೀರ್ಪಿನ ಕುರಿತು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.