ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿರುವಂತ ಸಫಾಯಿ ಕರ್ಮಚಾರಿ ಕೆಲಸಗಾರರಿಗೆ, ಇನ್ಮುಂದೆ ನಿಗಮದಿಂದಲೇ 2 ಜೊತೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ಅಲ್ಲದೇ ಪ್ರತಿ ಮೂರು ತಿಂಗಳಿಗೊಮ್ಮೆ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಭೇಟಿ ಮಾಡಿದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರೊಂದಿಗೆ ಕೆಲ ವಿಚಾರಗಳನ್ನು ಚರ್ಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 16 ವಿಭಾಗಗಳಿಂದ ಒಟ್ಟು 299 ಕಾರ್ಮಿಕ ಸ್ವಚ್ಛಾತಾ ಕೆಲಸಗಾರರು, ಸಫಾಯಿ ಕರ್ಮಚಾರಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕೆಲವೊಂದು ಬಸ್ ನಿಲ್ದಾಣಗಳಲ್ಲಿ ಟೆಂಡರ್ ಮೂಲಕ ಆಯ್ಕೆಯಾಗಿರುವ ಗುತ್ತಿಗೆದಾರರು ಸಫಾಯಿ ಕರ್ಮಚಾರಿಗಳಿಗೆ, ಸ್ವಚ್ಛತಾ ಕೆಲಸಗಾರರಿಗೆ ಸಮವಸ್ತ್ರ, ಕನಿಷ್ಠ ವೇತನ ನೀಡದೇ ಇರುವುದು ಹಾಗೂ ಆರೋಗ್ಯ ತಪಾಸಣೆ ಮಾಡದಿರುವ ಕುರಿತು ಮಾನ್ಯ ಆಯೋಗದ ಗಮನಕ್ಕೆ ಬಂದಿರುವುದಾಗಿ ತಿಳಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ನಿಗಮವು ನೇರವಾಗಿ ಸಫಾಯಿ ಕರ್ಮಚಾರಿಗಳನ್ನು, ಸ್ವಚ್ಛತಾ ಕೆಲಸಗಾರರು, ಕಾರ್ಮಿಕರನ್ನು ನೇಮಿಸಿಕೊಂಡಿರುವುದಿಲ್ಲ. ಆದರೆ, ಪ್ರಧಾನ ಉದ್ಯೋಗದಾತ ಮತ್ತು ಸಾಮಾಜಿಕ ಹೊಣೆಗಾರಿಕೆಯಡಿ ನಿಗಮವು ಒಟ್ಟು 299 ಸಫಾಯಿ ಕರ್ಮಚಾರಿಗಳು, ಸ್ವಚ್ಛತಾ ಕೆಲಸಗಾರರು, ಕಾರ್ಮಿಕರಿಗೆ 02 ಜೊತೆ ಸಮವಸ್ತ್ರವನ್ನು ನಿಗಮದ ವತಿಯಿಂದ ನೀಡುವುದಾಗಿ ತಿಳಿಸಿದರು ಹಾಗೂ 03 ತಿಂಗಳಿಗೊಮ್ಮೆ ಸದರಿ ಕಾರ್ಮಿಕರುಗಳಿಗೆ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡುವ ಕಾರ್ಯಕ್ಕೆ ಆದೇಶಿಸಿದರು.
ಅಲ್ಲದೆ, ಎರಡು ತಿಂಗಳ ಅವಧಿಯ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ. ವ್ಯವಸ್ಥಾಪಕ ನಿರ್ದೇಶಕರು ಆಯೋಗದ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಮತ್ತಷ್ಟು ಸುಧಾರಣೆ ತರುವುದಾಗಿ ಹಾಗೂ ಗುತ್ತಿಗೆದಾರಿಗೂ ಸಹ ಈ ಬಗ್ಗೆ ಸೂಕ್ತ ಆದೇಶ ನೀಡುವುದಾಗಿ ಶಿವಣ್ಣ ತಿಳಿಸಿದರು.