ಇದು ಕಟ್ಟು ಕಥೆಯಲ್ಲ. ಈಚೆಗೆ ನಾನು ನೋಡಿದ ಘಟನೆ. ಆ ಕುಟುಂಬ ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆಯಲು ಕಾರಣವಾದದ್ದು ಎರಡು ಕಾರಣಗಳು. ಒಂದು ರಾತ್ರಿ ವೇಳೆ ಲಾಂಗ್ ರೂಟ್ ಬಸ್ಗಳ ಚಾಲಕ ಜಿಲ್ಲಾ ಕೇಂದ್ರ ಆಗಿದ್ದರೂ ಬೈಪಾಸ್ ಹೋಗುತ್ತೇವೆ ಎಂದು ಪ್ರಯಾಣಿಕರ ಹಾದಿ ತಪ್ಪಿಸಿದ್ದು. ಇನ್ನೊಂದು ಊರಾಚೆ ಇರುವ ಢಾಬಾಗಳಲ್ಲಿ ಸಾರಿಗೆ ನಿಗಮದ ಬಸ್ನ್ನು ಊಟಕ್ಕೆ ನಿಲ್ಲಿಸಿದ್ದು.
– ಬಸವರಾಜ ಕರುಗಲ್, ಕೊಪ್ಪಳ
ರಾತ್ರಿ 9ರ ಸಮಯ. ಕೂಡು ಕುಟುಂಬವೊಂದು ಸಿಂಧನೂರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿತ್ತು. ಒಬ್ಬ ಮಹಿಳೆಯ ಕಂಕುಳಲ್ಲಿ ಮಗು. ಮತ್ತೊಬ್ಬ ಮಹಿಳೆಯ ತಲೆ ಮೇಲೆ ಮೂಟೆ. ನಡೆಯಲು ಆಯಾಸಪಡುವ ಓರ್ವ ವೃದ್ಧೆ. ಬಸ್ ನಿಲ್ದಾಣದೊಳಗೆ ಬರುವ ಎಲ್ಲ ಬಸ್ಗಳ ಜನರಿಗೆ ‘ಯಪ್ಪಾ ಈ ಬಸ್ ಎಲ್ಲಿಗೆ ಹೊಕೈತಿ?’ ಎಂದು ಕೇಳುತ್ತಲೇ ಇದ್ದರು.
ಅರ್ಧ ಗಂಟೆಯಾದರೂ ಆ ಕುಟುಂಬ ತೆರಳಬೇಕಿದ್ದ ಊರಿನ ಬಸ್ ಬರಲಿಲ್ಲ. ದಾಂಡೇಲಿ ಬಸ್ ಬರುವ ಸಮಯ. ಬಸ್ ಬಂದೇ ಬರುತ್ತೆ ಎಂದು ಕುಟುಂಬದಲ್ಲಿದ್ದ ಹಿರಿಯರೊಬ್ಬರು ಹೇಳಿದರು. ಅವರು ಹೇಳಿದಂತೆ ಶಕ್ತಿನಗರ – ದಾಂಡೇಲಿ ಬಸ್ ಬಂತು. ಬಸ್ ಬಂದದ್ದೇ ತಡ ತಡಬಡಾಯಿಸಿಕೊಂಡು ಬಸ್ ಹತ್ತಲು ಹೋದರೆ ನಿಲ್ಲಲೂ ಜಾಗ ಇಲ್ಲ. ಹೇಗೋ ತೂರಿಕೊಂಡು ಬಸ್ ಏರುತ್ತಿದ್ದಂತೆ ಚಾಲಕ,
‘ಎಲ್ಲಿಗೆ ಹೋಗಬೇಕ್ರಿ? ಎಂದ.
‘ಕೊಪ್ಪಳಕ್ಕೆ ಹೋಗತ್ತಲ್ರಿ’ ಎಂದು ಅನುಮಾನದಿಂದ ಕೇಳಿದ ಅಜ್ಜ.
‘ಸಾವ್ಕಾರ ಬೈಪಾಸ್ ಹೋಕ್ಕೇವಿ ನೋಡ್ರಿ. ಊರಾಗ ಹೋಗಂಗಿಲ್ಲ’ ಎಂದು ಚಾಲಕ ಬೇಜವಾಬ್ದಾರಿಯಿಂದ ಹೇಳಿದ.
ಪಾಪ.. ನಡುದಾರಿಯಲ್ಲಿ ಇಳಿದು ಅಡವಿ ಪಾಲಾಗುವ ಬದಲು ಸಮಯ ಮೀರಿದರೆ ಸಿಂಧನೂರು ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವುದು ಒಳಿತು ಎಂದು ಕುಟುಂಬದ ಹಿರಿಯ ನಿರ್ಧರಿಸಿ, ಕುಟುಂಬದ ಎಲ್ಲರನ್ನು ಬಸ್ನಿಂದ ಇಳಿಸಿದ.
ಇದನ್ನೂ ಓದಿ : ರೈತರ ಅಹೋರಾತ್ರಿ ಧರಣಿ| ನೆಲ ಜನ ಸಂಸ್ಕೃತಿಯನ್ನ ಉಳಿಸುವ ಹೋರಾಟವಿದು – ಇಂಧೂದರ ಹೊನ್ನಾಪುರ
ವೃದ್ಧೆಗೆ ಈ ಬಸ್ನಲ್ಲಿ ಸಿಕ್ಕಿದ್ದ ಸೀಟು ಮತ್ತೇ ಇನ್ನೊಂದು ಬಸ್ನಲ್ಲಿ ಸಿಗುತ್ತೋ? ಇಲ್ವೋ? ಮತ್ತೊಂದು ಬಸ್ ಬರುತ್ತೋ? ಬರಲ್ವೋ? ಎನ್ನುವ ಆಕ್ರೋಶದಲ್ಲಿ ಬಸ್ನಿಂದ ಇಳಿಸಿದ ವ್ಯಕ್ತಿ ಮೇಲೆ ಹರಿಹಾಯ್ದಳು.
‘ಏಯ್ ತಡೀ ಬೇ. ಶಕ್ತಿನಗರ-ಅಂಬಿಕಾನಗರ ಬಸ್ ಬರುದೈತಿ. ಅದ ಲಾಸ್ಟ್ ಬಸ್. ಆಮ್ಯಾಗ ಬಸ್ಸ ಇಲ್ಲ.’ ಎನ್ನುತ್ತಿದ್ದಂತೆ ಕೊಪ್ಪಳದ ಕಡೆಗಿನ ಬಸ್ಸೊಂದು ನಿಲ್ದಾಣ ಪ್ರವೇಶಿಸಿತು. ಯಥಾ ಪ್ರಕಾರ ಈ ಬಸ್ನಲ್ಲೂ ನಿಲ್ಲಲು ಜಾಗವಿಲ್ಲ. ಈಗ ಬಸ್ ಹತ್ತುವ ಮುನ್ನವೇ ನಿರ್ವಾಹಕನನ್ನು ಕೇಳಿದರು. ಕೊಪ್ಪಳಕ್ಕೆ ಹೋಗುತ್ತದೆ ಎಂದು ಖಚಿತ ಭರವಸೆ ಸಿಕ್ಕ ಬಳಿಕ ತಡಬಡಾಯಿಸಿಕೊಂಡು ಬಸ್ ಏರಿದ್ದಾಯ್ತು. ಈ ಸಲ ವೃದ್ಧೆಗೆ ಆಸನ ಸಿಗಲಿಲ್ಲ. ಬಸ್ನ ಬಾಗಿಲು ಬಳಿ ಇರುವ ಮೆಟ್ಟಿಲ ಮೇಲೆ ಕುಳಿತುಕೊಂಡಿತು ಅಜ್ಜಿ.
ಬಸ್ ಚಲಿಸುತ್ತಿದ್ದಂತೆ ಊರು ತಲುಪಿದಷ್ಟೇ ಖುಷಿ ಆ ಕುಟುಂಬಕ್ಕೆ. ಏಕೆಂದರೆ ಒಂದು ಗಂಟೆಯೊಳಗೆ ತಾವಿರುವ ಬಸ್ ಕೊಪ್ಪಳ ತಲುಪುತ್ತದೆ. ಕೊಪ್ಪಳದಿಂದ ಹತ್ತಿರ ಇರುವ ಆ ಕುಟುಂಬದ ಗ್ರಾಮಕ್ಕಿರುವ ಕೊನೆ ಬಸ್ಸು ಕೊಪ್ಪಳದಲ್ಲಿ ಸಿಗುತ್ತದೆ. ನಿರಮ್ಮಳವಾಗಿ ಮನೆ ಸೇರಬಹುದು ಎಂದು ಕುಟುಂಬ ಲೆಕ್ಕಾಚಾರ ಹಾಕಿತು.
ಆದರೆ ಹದಿನೈದು-ಇಪ್ಪತ್ತು ಕಿ.ಮೀ. ಕ್ರಮಿಸುವಷ್ಟರಲ್ಲಿ ಆ ಕುಟುಂಬದ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಊರ ಹೊರಗೆ ಸುತ್ತಲೂ ಕತ್ತಲಿರುವ ಕಡೆ ಬಸ್ ನಿಲ್ಲುತ್ತಿದ್ದಂತೆ, ‘ಊಟಕ್ಕ ಟೈಮ್ ಇದೆ ನೋಡ್ರಿ.’ ಎಂದು ನಿರ್ವಾಹಕ ಬಸ್ನ ಪ್ರಯಾಣಿಕರಿಗೆ ಸೂಚನೆ ಕೊಟ್ಟು ಕೆಳಗಿಳಿದ. ಬಸ್ ಎದುರಿಗೆ ಇದ್ದದ್ದು ಢಾಬಾ!

ಪಾಪ.. ಆ ಕುಟುಂಬಕ್ಕೆ ಮತ್ತೊಂದು ಸಂಕಷ್ಟ. ಕೊಪ್ಪಳದಲ್ಲಿ ಕೊನೆ ಬಸ್ ಹೋಗುವ ಮುನ್ನ ಈ ಬಸ್ ಕೊಪ್ಪಳಕ್ಕೆ ತಲುಪುತ್ತದೆಯೋ? ಇಲ್ಲವೋ? ಎನ್ನುವ ಆತಂಕ. ಊಟದ ಟೇಬಲ್ನಲ್ಲಿದ್ದ ನಿರ್ವಾಹಕನ ಬಳಿ ಹೋಗಿ, ಆ ಕುಟುಂಬದ ವ್ಯಕ್ತಿಯೊಬ್ಬ ‘ಕಂಡಕ್ಟರ್ ಸಾಹೇಬ್ರ ಊಟಕ್ಕ ಎಷ್ಟೊತ್ತಿನವರೆಗೆ ಟೈಮ್ ಐತ್ರಿ? ಎಂದ. ಆಗ ಕಂಡಕ್ಟರ್ ಮಹಾಶಯ, ‘ಧಣ್ಯಾರ, ಪ್ಯಾಸೆಂಜರ್ ಜಲ್ದಿ ಜಲ್ದಿ ಊಟ ಮಾಡಿದ್ರ ಲಗೂನ ಅಂದ್ರ ಹತ್ತ-ಹದಿನೈದು ನಿಮಿಷದಾಗ ಬಿಡ್ತಿವಿ. ಪ್ಯಾಸೆಂಜರ್ ಊಟ ತಡ ಮಾಡಿದ್ರ ಒಂದರ್ಧ ಗಂಟೆ ಆಗ್ಬೋದ್ರಿ’ ಎಂದ. ‘ಹಂಗಂದ್ರ ಕೊಪ್ಪಳದಾಗ ನಮಗ ಲಾಸ್ಟ್ ಬಸ್ ತಪ್ಪತ್ರಿ’ ಎಂದು ಗೊಣಗಿದ. ಆಗ ‘ಅದಕ್ಕ ನಾನೇನ್ ಮಾಡಾಕಕೈತ್ರಿ? ನಾವು ಮನಸ್ಯಾರ. ಊಟ-ಗಿಟ ಮಾಡುಣ ಬ್ಯಾಡ ನಾವು?’ ಎಂದು ನಿರ್ವಾಹಕ ಜೋರು ಮಾಡುತ್ತಿದ್ದಂತೆ. ‘ಉಣ್ರಿ… ಉಣ್ರಿ…’ ಎಂದು ಸಪ್ಪೆ ಮುಖ ಹಾಕಿಕೊಂಡು ಬಸ್ ಏರಿದ ಕುಟುಂಬದ ವ್ಯಕ್ತಿ.
ಕೊನೆಗೂ ಆ ಬಸ್ ಕೊಪ್ಪಳಕ್ಕೆ ಬಂದು ಸೇರುವಷ್ಟರಲ್ಲಿ ಕೊಪ್ಪಳದಿಂದ ಇದ್ದ ಹಳ್ಳಿಯ ಕೊನೆ ಬಸ್ ಹೋಗಿತ್ತು. ಬೆಳಗಿನ ಜಾವದವರೆಗೆ ಆ ಕುಟುಂಬ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು.
ಇದು ಕಟ್ಟು ಕಥೆಯಲ್ಲ. ಈಚೆಗೆ ನಾನು ನೋಡಿದ ಘಟನೆ. ಆ ಕುಟುಂಬ ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆಯಲು ಕಾರಣವಾದದ್ದು ಎರಡು ಕಾರಣಗಳು. ಒಂದು ರಾತ್ರಿ ವೇಳೆ ಲಾಂಗ್ ರೂಟ್ ಬಸ್ಗಳು ಜಿಲ್ಲಾ ಕೇಂದ್ರ ಆಗಿದ್ದರೂ ಬೈಪಾಸ್ ಹೋಗುತ್ತೇವೆ ಎಂದು ಪ್ರಯಾಣಿಕರ ಹಾದಿ ತಪ್ಪಿಸಿದ್ದು. ಇನ್ನೊಂದು ಊರಾಚೆ ಇರುವ ಢಾಬಾಗಳಲ್ಲಿ ಸಾರಿಗೆ ನಿಗಮದ ಬಸ್ಗಳನ್ನು ಊಟಕ್ಕೆ ನಿಲ್ಲಿಸಿದ್ದು.
ಈಗ ಸುಮಾರು 60 ಕಿ.ಮೀ. ಗೆ ಒಂದರಂತೆ ಜಿಲ್ಲಾ ಕೇಂದ್ರಗಳಿವೆ. ರಾತ್ರಿ ವೇಳೆ ಅದೇ ರೂಟ್ನಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ಆ ಊರಿಗೆ ಹೋಗುವ ಪ್ರಯಾಣಿಕರಿಲ್ಲದಿದ್ದರೂ ರೂಟ್ ಪ್ರಕಾರ ಬಸ್ ನಿಲ್ದಾಣ ಪ್ರವೇಶಿಸಲೇಬೇಕು. ಸಂಚಾರ ನಿಯಂತ್ರಕರ ಬಳಿ ಎಂಟ್ರಿ ಮಾಡಿಸಲೇಬೇಕು. ಒಂದೊಮ್ಮೆ ಎಂಟ್ರಿ ಆಗಿರದಿದ್ದರೆ ಚಾಲಕ ಮತ್ತು ನಿರ್ವಾಹಕನ ಮೇಲೆ ಕ್ರಮ ಜರುಗಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಹೇಳುತ್ತಾರೆ. ನಿತ್ಯ ಇಂಥ ಸಾಕಷ್ಟು ಬಸ್ಗಳು ಈಗ ಬೈಪಾಸ್ ಆಗಿರೋದ್ರಿಂದ ರಾತ್ರಿ ವೇಳೆ ತಾಲೂಕು ಕೇಂದ್ರ ಬಿಡಿ, ಜಿಲ್ಲಾ ಕೇಂದ್ರಗಳ ನಿಲ್ದಾಣಕ್ಕೆ ಬರುತ್ತಿಲ್ಲ ಎನ್ನುವ ದೂರುಗಳು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜನರದ್ದು.
ಬಸ್ ಸಂಚಾರದ ಈ ಅವ್ಯವಸ್ಥೆ ಒಂದು ಕಡೆಯಾದರೆ ಇನ್ನೂ ಊಟದ ವಿಚಾರ. ಅದು ಮಧ್ಯಾಹ್ನವೇ ಇರಲಿ, ರಾತ್ರಿಯೇ ಇರಲಿ. ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿ ಕ್ಯಾಂಟೀನ್ಗಳು ಇದ್ದೇ ಇರುತ್ತವೆ. ಕ್ಯಾಂಟೀನ್ ಮಾಲಕರು ಆಯಾ ಸಾರಿಗೆ ನಿಗಮದ ಅಧೀನಾಧಿಕಾರಿಗಳಿಗೆ ಬಾಡಿಗೆ ಕಟ್ಟುತ್ತಾರೆ. ಅಲ್ಲಿ ಊಟೋಪಹಾರದ ಸೌಲಭ್ಯವಿದ್ದರೂ ಊರ ಹೊರಗಿನ ಢಾಬಾಗಳಿಗೆ ಬಸ್ ನಿಲ್ಲಿಸುವ ಪರಿಪಾಠ ಹೆಚ್ಚಾಗಿದೆ. ಢಾಬಾ ಮಾಲಕರು ಬಸ್ನ ಚಾಲಕ ಮತ್ತು ನಿರ್ವಾಹಕರಿಗೆ ಉಚಿತವಾಗಿ ಊಟ-ಉಪಹಾರ ಕೊಡುವ ಹಾಗೂ ಸಾರಿಗೆ ನಿಗಮಕ್ಕೆ ಪ್ರತಿ ತಿಂಗಳು ಹಣ ಕಟ್ಟುತ್ತಾರೆ (ಅದನ್ನು ವಂತುಗೆ ಎನ್ನದೇ ಬೇರೆ ಏನೆನ್ನವೇಕು?) ಎನ್ನುವ ಮಾತುಗಳಿದ್ದು, ಈ ಕಾರಣಕ್ಕೆ ಢಾಬಾದಿಂದ ಹತ್ತು-ಹದಿನೈದು ಕಿ.ಮೀ. ದೂರದ ಊರುಗಳಿಗೆ ತೆರಳುವ ಜನರು ಅನಗತ್ಯವಾಗಿ ಸುಮಾರು 20-25 ನಿಮಿಷ ಕಾಲ ಕಳೆಯಬೇಕು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಬಹುದೇನೋ? ಆದರೆ ಬಸ್ ನಿಲ್ದಾಣದ ಕ್ಯಾಂಟೀನ್ಗಳಲ್ಲಿ ಊಟ-ಉಪಹಾರ ಮಾಡಿದರೆ ಎಲ್ಲ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಢಾಬಾ ಸಂಸ್ಕೃತಿಗೆ ಇತಿಶ್ರೀ ಹೇಳಬೇಕಿದೆ. ಆ ಮೂಲಕ ನಿಗಮಗಳಿಗೆ ಬಾಡಿಗೆ ಕಟ್ಟುವ ನಿಲ್ದಾಣದೊಳಗಿರುವ ಕ್ಯಾಂಟೀನ್ಗಳಿಗೆ ಸೌಲಭ್ಯ ಕಲ್ಪಿಸಿ, ಪ್ರಯಾಣಿಕರಿಗೆ ಹೊರೆ ಆಗದ ದರ ನಿಗದಿಗೊಳಿಸಿ, ಕ್ಯಾಂಟೀನ್ ಮಾಲಕರಿಗೂ ಬಾಡಿಗೆ ಹೊರೆಯಾಗದಂತೆ ವ್ಯವಸ್ಥೆ ಮಾಡಿಕೊಂಡರೆ ಜನಸಾಮಾನ್ಯರ ಅಮೂಲ್ಯ ಸಮಯ ಉಳಿಯುತ್ತದೆ. ಸಾರಿಗೆ ನಿಗಮವೂ ಸದೃಢವಾಗುತ್ತದೆ.
ಇದನ್ನೂ ನೋಡಿ : ಭೂಸ್ವಾಧೀನ ವಿರೋಧಿಸಿ ಅನ್ನದಾತರಿಂದ ಅಹೋರಾತ್ರಿ ಧರಣಿ Janashakthi Media
