ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು ; ಸದನದ ಬಾವಿಗಿಳಿದು ಪ್ರತಿಭಟನೆ

ಬೆಂಗಳೂರು : ಕೇಸರಿ ಧ್ವಜ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನ ಸಭೆಯಲ್ಲಿ ಇಂದು ಸಹ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರೆಸಿದ್ದು ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನ ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.

ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು ನಿನ್ನೆಯಿಂದಲೂ  ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಇಂದು ಸಹ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರ ಧರಣಿ  ನಡುವೆ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಈಶ್ವರಪ್ಪ ಅವರು ಬಳಸಿರುವ ಪದಗಳನ್ನು ನಾವು ಗಮನಿಸಿದ್ದೇವೆ, ಅವರ ಮೇಲೆ ರಾಷ್ಟ್ರದ್ರೋಹದ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಒಬ್ಬ ಸಚಿವ ಈ ರೀತಿ ಹೇಳಿಕೆ ಕೊಟ್ಟಾಗ ಸುಮ್ಮನಿರೋದು ಸರಿಯಲ್ಲ, ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಕಾಂಗ್ರೆಸ್‌ ಶಾಸಕರು ಘೋಷಣೆ ಕೂಗಿದರು.

ಪ್ರತಿಪಕ್ಷ ಕಾಂಗ್ರೆಸ್ ಬೇಡಿಕೆ ತಳ್ಳಿಹಾಕಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಈಶ್ವರಪ್ಪ ಅವರು ತಮ್ಮ ಹೇಳಿಕೆಯನ್ನು ಎಲ್ಲೂ ಪುನರುಚ್ಚರಿಸಿಲ್ಲ. ಅವರು ರಾಷ್ಟ್ರಧ್ವಜದ ವಿರೋಧ ಹೇಳಿಕೆ ಕೊಟ್ಟಿಲ್ಲ. ಈ ವಿಚಾರವನ್ನು ಕೈಬಿಟ್ಟು ಕಲಾಪ ನಡೆಸಲು ಅನುವು ಮಾಡಿಕೊಡಲು ಮನವಿ ಮಾಡುತ್ತೇನೆ ಎಂದರು.

ಸಚಿವರ ಹೇಳಿಕೆ ಒಪ್ಪದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಪ್ರತಿಭಟನೆ ಜೋರಾದ ಹಿನ್ನೆಲೆ  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನ ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.

Donate Janashakthi Media

Leave a Reply

Your email address will not be published. Required fields are marked *