ಕೃಷಿಕರ ಮಾತು ಆಲಿಸದಿದ್ದರೆ ಮೈತ್ರಿಕೂಟ ತ್ಯಜಿಸುವುದಾಗಿ ಹೇಳಿದ ಎನ್‌ಡಿಎ ಮಿತ್ರಪಕ್ಷ!

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಹನುಮಾನ್ ಬೆನಿವಾಲ್

ಜೈಪುರ್: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ಎನ್‌ಡಿಎ ಮಿತ್ರಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ(ಆರ್‌ಎಲ್‌ಪಿ), ಕೃಷಿಕರ ಸಮಸ್ಯೆ ಬಗೆಹರಿಯದಿದ್ದರೆ ಮೈತ್ರಿಕೂಟ ತ್ಯಜಿಸುವ ಬೆದರಿಕೆ ಹಾಕಿದೆ.

ದೆಹಲಿ ಚಲೋ  ಪ್ರತಿಭಟನೆಯನ್ನು ಬೆಂಬಲಿಸಿರುವ ಆರ್‌ಎಲ್‌ಪಿ ಮುಖ್ಯಸ್ಥ ಹಾಗೂ ಸಂಸದ ಹನುಮಾನ್ ಬೆನಿವಾಲ್ , ರೈತರ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಆಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ನ್ಯಾಯಯುತವಾಗಿದೆ ಎಂದಿರುವ ಬೆನಿವಾಲ್, ಒಂದುವೇಳೆ ಸರ್ಕಾರ ರೈತರ ಒತ್ತಾಯಕ್ಕೆ ಮಣಿಯದಿದ್ದರೆ ಎನ್‌ಡಿಎ ಮೈತ್ರಿಕೂಟ ತ್ಯಜಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.  ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಹನುಮಾನ್ ಬೆನಿವಾಲ್, ರೈತರೊಂದಿಗೆ ಮಾತುಕತೆ ನಡೆಸಲು ಡಿ.3ರವರೆಗೆ ಕಾಯದೇ ಈ ಕೂಡಲೇ ಮಾತುಕತೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ಕೃಷಿ ಕಾನೂನಿನಲ್ಲಿ ಮಾರ್ಪಾಡು ಮಾಡುವುದು ಸೂಕ್ತ ಎಂದಿರುವ ಬೆನಿವಾಲ್, ರೈತರಿಗೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡದಿರುವುದು ದುರಂತ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಈ ಕೂಡಲೇ ಕೇಂದ್ರ ಸರ್ಕಾರ ರೈತರ ಹಕ್ಕೊತ್ತಾಯಗಳನ್ನು ಪರಿಗಣಿಸದಿದ್ದರೆ, ಎನ್‌ಡಿಎ ಮೈತ್ರಿಕೂಟ ತೊರೆಯುವುದಾಗಿ ಹನುಮಾನ್ ಬೆನಿವಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಾವೂ ಕೂಡ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಬೆನಿವಾಲ್ ಎಚ್ಚರಿಸಿದ್ದಾರೆ.

ಈಗಾಗಲೇ ಕೇಂದ್ರದ ಕೃಷಿ ಕಾನೂನನ್ನು ವಿರೋಧಿಸಿ ಪಂಜಾಬ್‌ನ ಶಿರೋಮಣಿ ಅಕಾಲಿ ದಳ ಎನ್‌ಡಿಎ ಮೈತ್ರಿಕೂಟ ತ್ಯಜಿಸಿದ್ದು, ಇದೀಗ ಆರ್‌ಎಲ್‌ಪಿ ಕೂಡ ಹೊರನಡೆಯುವ ಮಾತುಗಳನ್ನಾಡುತ್ತಿರುವುದು ಕುತೂಹಲ ಕೆರಳಿಸಿದೆ.

Donate Janashakthi Media

Leave a Reply

Your email address will not be published. Required fields are marked *