ಜೂನ್ 26: “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ದಿನಾಚರಣೆ: ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ

ನವದೆಹಲಿ : ಜೂನ್ 14, 2021ರಂದು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ರಾಜಧಾನಿ ದಿಲ್ಲಿಗೆ ಹೋಗುವ ಹೆದ್ದಾರಿಗಳಲ್ಲಿ ಕೂತು ನಡೆಸುತ್ತಿರುವ ಸತತ ಪ್ರತಿಭಟನೆ 200 ದಿನಗಳನ್ನು ಪೂರ್ಣಗೊಳಿಸಿದೆ. ಈ ಚಳುವಳಿಗೆ ಏಳು ತಿಂಗಳುಗಳಾಗುವ ಜೂನ್ 26, 2021ನ್ನು ದೇಶಾದ್ಯಂತ “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ದಿನವಾಗಿ ಆಚರಿಸಲು ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ತಮ್ಮ ಸದಸ್ಯರಿಗೆ ಮತ್ತು ಎಲ್ಲ ಜನವಿಭಾಗಗಳಿಗೆ ಕರೆ ನೀಡಿವೆ. ಜೂನ್ 26 ದೇಶದ ಪ್ರಖ್ಯಾತ ರೈತ ನೇತಾರ ಸ್ವಾಮಿ ಸಹಜಾನಂದ ಸರಸ್ವತಿಯವರ ಮರಣ ವಾರ್ಷಿಕದ ದಿನವೂ ಆಗಿದೆ.

ರೈತರು ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಮತ್ತು ವಿದ್ಯುತ್ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಕನಿಷ್ಟ ಬೆಂಬಲ ಬೆಲೆಗಳಿಗೆ ಕಾನೂನಿನ ಖಾತ್ರಿ ಕೊಡಬೇಕು ಎಂದು ಆಗ್ರಹಿಸಿ ಈ 200ದಿನಗಳಲ್ಲಿ ಕೊರೆಯುವ ಚಳಿ, ಸುಂಟರಗಾಳಿ, ಸುಡುಬಿಸಲು ಮತ್ತು ಈಗ ಮಳೆಯನ್ನು ಎದುರಿಸಿ ಈ ಹೋರಾಟವನ್ನು ನಡೆಸಿದ್ದಾರೆ, ಮುಂದುವರೆಸಿಕೊಂಡು ಹೋಗುತ್ತಿದ್ದಾರೆ, ತಮ್ಮ 500 ಸಂಗಾತಿಗಳನ್ನು ಇದುವರೆಗೆ ಕಳಕೊಂಡಿದ್ದಾರೆ. ಆದರೆ ಕಾರ್ಪೊರೇಟ್-ಪರವಾದ ಕೇಂದ್ರ ಸರಕಾರ ಈ ಮೂರು ಕಾಯ್ದೆಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಮುಂದೊತ್ತಲು ಟೊಂಕ ಕಟ್ಟಿ ನಿಂತಿದೆ. ಇದರ ವಿರುದ್ಧ ಜೂನ್ 26 ರಂದು ಈ ಕಾರ್ಯಾಚರಣೆ ನಡೆಸಲು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.

ಇದನ್ನು ಓದಿ: ಜೂನ್‌ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್‌ಕೆಎಂ ಕರೆ

ಈ ರೈತ ಹೋರಾಟವಲ್ಲದೆ, ದೇಶ ಇಂದು ಅನುಭವಿಸುತ್ತಿರುವ ಸರ್ವಾಧಿಕಾರಶಾಹೀ ಬಿಜೆಪಿ ಆಳ್ವಿಕೆ ಮತ್ತು ಅದರ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಇನ್ನೂ ಹಲವು ಹೋರಾಟಗಳು ನಡೆಯುತ್ತಿವೆ. ಪುಟ್ಟ ದ್ವೀಪ ಲಕ್ಷದ್ವೀಪದ ನಿವಾಸಿಗಳೂ ಬಿಜೆಪಿಯ ಸರ್ವಾಧಿಕಾರಶಾಹೀ ನಡಾವಳಿಯ ವಿರುದ್ಧ ದನಿಯೆತ್ತಿದ್ದಾರೆ. ಇನ್ನು ಕೊವಿಡ್-19ರ ವಿನಾಶಕಾರೀ ಎರಡನೇ ಅಲೆಯನ್ನು ಎದುರಿಸುವಲ್ಲಿಯಂತೂ ಈ ಸರಕಾರ ಸಂಪೂರ್ಣ ಗೊಂದಲವನ್ನೇ ಸೃಷ್ಟಿಸಿದೆ.

ಆದ್ದರಿಂದ ಜೂನ್ 26ರಂದು ದೇಶಾದ್ಯಂತ ಜಿಲ್ಲೆಗಳ, ತಹಸೀಲುಗಳ ಮಟ್ಟದ ಪ್ರತಿಭಟನೆಗಳಲ್ಲದೆ, ವಿವಿಧ ರಾಜ್ಯಗಳಲ್ಲಿ ರಾಜಭವನಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಈ ಕೇಂದ್ರೀಯ ಕಾರ್ಮಿಕ ಸಂಘನೆಗಳು ಹೇಳಿವೆ.

ಈ “ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ” ದಿನಾಚರಣೆಯ ಏಳು ಬೇಡಿಕೆಗಳು ಹೀಗಿವೆ:

1. ನಾಲ್ಕು ಕಾರ್ಮಿಕ ಸಂಹಿತೆಗಳು, ಮೂರು ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ರದ್ದು ಮಾಡಬೇಕು;

2. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳಿಗೆ ಕಾನೂನಾತ್ಮಕ ಖಾತ್ರಿಯನ್ನು ಕೊಡಬೇಕು;

3. ಒಂದ ನಿರ್ದಿಷ್ಟ ಸಮಯ ಚೌಕಟ್ಟಿನಲ್ಲಿ ಸಾರ್ವತ್ರಿಕ ಉಚಿತ ಲಸಿಕೀಕರಣ;

4. ಅಗತ್ಯವಿರುವ ಪ್ರತಿವ್ಯಕ್ತಿಗೂ 10 ಕೆಜಿ ಆಹಾರ ಧಾನ್ಯಗಳನ್ನು ಮತ್ತು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ರೂ.7500 ಕೊಡಬೇಕು;

5. ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸರಕಾರೀ ಇಲಾಖೆಗಳ ಖಾಸಗೀಕರಣದ ನೀತಿಯನ್ನು ಹಿಂದಕ್ಕೆ ಪಡೆಯಬೇಕು.

6. ರೈಲ್ವೆ, ರಸ್ತೆ ಸಾರಿಗೆ, ಕಲ್ಲಿದ್ದಲು, ರಕ್ಷಣೆ, ಉಕ್ಕು ಪ್ರಾಧಿಕಾರ (ಸೇಲ್), ಬಿಹೆಚ್‌ಇಎಲ್, ದೂರಸಂಪರ್ಕ ಮತ್ತು ಅಂಚೆ ಸೇವೆಗಳು, ಬ್ಯಾಂಕುಗಳು, ವಿಮೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಸೇವೆಗಳು, ಭವಿಷ್ಯ ನಿಧಿ ಸಂಘಟನೆ, ಬಂದರು ಮತ್ತು ಹಡಗುಕಟ್ಟೆಗಳಲ್ಲಿ ರಾತ್ರಿ-ಹಗಲೆನ್ನದೆ ದುಡಿಯುತ್ತಿರುವ ಸರಕಾರಿ ಮತ್ತು ಸಾರ್ವಜನಿಕ ವಲಯದ ನೌಕರರನ್ನು ಮುಂಚೂಣಿಯ ಸಿಬ್ಬಂದಿ ಎಂದು ಪರಿಗಣಿಸಿ ಅದಕ್ಕನುಗುಣವಾಗಿ ಅವರಿಗೆ ಪರಿಹಾರ ನೀಡಬೇಕು.

7. ಆಶಾ, ಅಂಗನವಾಡಿ ನೌಕರರು, ಸಫಾಯಿ ಕಾರ್ಮಿಕರು ಸೇರಿದಂತೆ ಎಲ್ಲ ಮುಂಚೂಣಿಯ ಕಾರ್ಯಕರ್ತರಿಗೆ ರೂ. 50 ಲಕ್ಷ ವಿಮೆ ಮತ್ತು ಕೊವಿಡ್-19ರಿಂದಾಗಿ ಸತ್ತಿರುವ ಕಾರ್ಮಿಕರ ಕುಟುಂಬಗಳಿಗೆ ಸಾಕಷ್ಟು ಪರಿಹಾರ ಕೊಡಬೇಕು.

ಐ.ಎನ್‌.ಟಿ.ಯು.ಸಿ, ಎ.ಐ.ಟಿ.ಯು.ಸಿ, ಹೆಚ್‌.ಎಂ.ಎಸ್, ಸಿ.ಐ.ಟಿ.ಯು., ಎ.ಐ.ಯು.ಟಿ.ಯು.ಸಿ, ಟಿ.ಯು.ಸಿ.ಸಿ, ಎಸ್‌.ಇ.ಡಬ್ಲ್ಯು.ಎ, ಎ.ಐ.ಸಿ.ಸಿ.ಟಿ.ಯು, ಎಲ್‌.ಪಿ.ಎಫ್ ಮತ್ತು ಯು.ಟಿ.ಯು.ಸಿ ಜೂನ್ 26ರ ಈ ದೇಶವ್ಯಾಪಿ ಕಾರ್ಯಾಚರಣೆಗೆ ಜಂಟಿಯಾಗಿ ಕರೆ ನೀಡಿವೆ.

Donate Janashakthi Media

Leave a Reply

Your email address will not be published. Required fields are marked *