ಕೃಷಿ ಸುಧಾರಣಾ ನೀತಿ ಖಂಡಿಸಿ ಪಂಜಾಬ್ ಸಿಎಂ ಧರಣಿ

  • ಕೃಷಿ ಕ್ಷೇತ್ರದ ಸುಧಾರಣೆಗಳನ್ನು ವಿರೋಧಿಸಿ ರೈತರ  ‘ರಾಜಕೀಯ ಆಂದೋಲನ’ ಕೊನೆಗಾಣಿಸುವಂತೆ  ಕೇಂದ್ರ ಸೂಚನೆ

ನವದೆಹಲಿ: ಕೇಂದ್ರದ ಕೃಷಿ ಕಾನೂನು ಸುಧಾರಣೆಗಳ ನೀತಿ ವಿರೋಧಿಸಿ ನವದೆಹಲಿಯಲ್ಲಿ ಬುಧವಾರ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಭಟನೆ ನಡೆಸಿದರು.

‘ಕೇಂದ್ರದ ನೂತನ ಕೃಷಿ ನೀತಿ ಖಂಡಿಸಿ ಪಂಜಾಬ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅಲ್ಲಿ ರೈಲು ಸೇವೆಯನ್ನು ರದ್ದುಗೊಳಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಸಿಂಗ್ ಆರೋಪಿಸಿದ್ದಾರೆ.

ಪ್ರತಿಭಟನೆಗೂ ಮುನ್ನ ಸಿಂಗ್ ಅವರು ಕಾಂಗ್ರೆಸ್ ಸಂಸದರು ಮತ್ತು ಶಾಸಕರೊಂದಿಗೆ ರಾಜ್‌ಘಾಟ್‌ಗೆ ಭೇಟಿ ನೀಡಿದರು.

‘ಪಂಜಾಬ್‌ನಲ್ಲಿ ರೈಲು ಸೇವೆಗಳನ್ನು ರದ್ದುಪಡಿಸಿರುವುದರಿಂದ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಗೆ ತೊಂದರೆಯಾಗಿದೆ. ಅಷ್ಟೇ ಅಲ್ಲ, ಬಿತ್ತನೆ ಸಮಯದಲ್ಲಿ ಗೊಬ್ಬರ ಸರಬರಾಜು ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಾರ್ಚ್‌ ತಿಂಗಳಿಂದ ಪಂಜಾಬ್‌ಗೆ ಜಿಎಸ್‌ಟಿ ಬಾಕಿ ಪಾವತಿಯಾಗಿಲ್ಲ. ಕೇಂದ್ರ ಸರ್ಕಾರ ವಿಪತ್ತು ಪರಿಹಾರ ನಿಧಿಯನ್ನೂ ನೀಡಿಲ್ಲ. ನಮ್ಮಲ್ಲಿ ಹಣ ಇಲ್ಲ. ಕಲ್ಲಿದ್ದಲು ದಾಸ್ತಾನು ಕೂಡಾ ಮುಗಿದಿದೆ. ಇಂಥ ಸಂದರ್ಭದಲ್ಲಿ ನಾವು ಬದುಕುಳಿಯುವುದು ಹೇಗೆ’ ಎಂದು ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ.

ಅಮರಿಂದರ್ ಸಿಂಗ್ ಅವರ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ಕೃಷಿ ಕ್ಷೇತ್ರದ ಸುಧಾರಣೆಗಳನ್ನು ವಿರೋಧಿಸಿ, ರೈತರು ಕೈಗೊಂಡಿರುವ ‘ರಾಜಕೀಯ ಆಂದೋಲನ’ವನ್ನು ಕೊನೆಗಾಣಿಸುವಂತೆ ಪಂಜಾಬ್‌ಗೆ ತಿಳಿಸಿದೆ. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ರೈತರೊಂದಿಗೆ ಮಾತುಕತೆ ನಡೆಸುವಂತೆಯೂ ಕೇಂದ್ರ ಸರ್ಕಾರ ಸೂಚಿಸಿದೆ. ಕೃಷಿಕ್ಷೇತ್ರದ ಸುಧಾರಣೆಗಳ ಕುರಿತು ಪಂಜಾಬ್ ಮುಖ್ಯಮಂತ್ರಿ, ರೈತರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದೂ ಆರೋಪಿಸಿದೆ.

‘ಈ ವರ್ಷ ರೈತರು ಭತ್ತವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದು, ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯಿಂದ ಲಾಭವನ್ನೂ ಗಳಿಸಿದಿದ್ದಾರೆ. ಈ ವರ್ಷ ಭತ್ತದ ಸಂಗ್ರಹವೂ ಹೆಚ್ಚಿದ್ದು, ರೈತರು ಹೊಸ ಕೃಷಿ ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *