ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಸೆಟೆದುನಿಂತ ಅನ್ನದಾತ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಹಲವು ಸಂಘಟನೆಗಳು ಇಂದು ಭಾರತ್ ಬಂದ್ ನಡೆಸಿವೆ. ಉತ್ತರ ಭಾರತದಲ್ಲಿ ಬಂದ್​ನ ತೀವ್ರತೆ ಹೆಚ್ಚಿದೆ. ಅದರಲ್ಲೂ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಪ್ರತಿಭಟನೆಗಳು ತೀವ್ರವಾಗಿ ನಡೆದಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ರೈತರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಾದ್ಯಂತ ಅಲ್ಲಲ್ಲಿ ಹೆದ್ದಾರಿ ತಡೆದು ಸಾಂಕೇತಿಕ ಪ್ರತಿಭಟನೆ ಮಾಡಿವೆ. ಉತ್ತರ ಭಾರತದಲ್ಲಿ ಹಲವು ಹೆದ್ದಾರಿಗಳನ್ನ ಪ್ರತಿಭಟನಾಕಾರರು ತಡೆದಿದ್ಧಾರೆ. ರೈಲು ತಡೆ ಕೂಡ ನಡೆಸಿದ್ದಾರೆ. ಉತ್ತರ ಭಾರತದ ಅನೇಕ ಹೆದ್ದಾರಿಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಪಂಜಾಬ್​ನಲ್ಲಿ ದೊಡ್ಡ ಮಟ್ಟದಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿವೆ. ಎನ್​ಡಿಎ ಅಂಗಪಕ್ಷ ಶಿರೋಮಣಿ ಅಕಾಲಿ ದಳ ಕೂಡ ಈ ಹೋರಾಟಕ್ಕೆ ಕೈಜೋಡಿಸಿದೆ. ಅಲ್ಲಿನ ರೈತರು ಮೂರು ದಿನ ರೈಲು ತಡೆ ಅಭಿಯಾನ ಪ್ರಾರಂಭಿಸಿದ್ದಾರೆ. ಅಕ್ಟೋಬರ್ 1ರಿಂದ ಅನಿರ್ದಿಷ್ಟಾವಧಿಯವರೆಗೆ ಪಂಜಾಬ್​ನಾದ್ಯಂತ ರೈಲ್ ರೋಕೋ ನಡೆಯಲಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರ ಕೂಡ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ಸೆಕ್ಷನ್ 144ರ ಅಡಿಯಲ್ಲಿ ಯಾವ ರೈತರ ಮೇಲೂ ಎಫ್​​ಐಆರ್ ದಾಖಲಿಸುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಭರವಸೆ ನೀಡಿದ್ಧಾರೆ.

ಉತ್ತರ ಪ್ರದೇಶದಲ್ಲೂ ಪ್ರತಿಭಟನೆಯ ಬಿಸಿ ಹೆಚ್ಚಿದೆ. ಬಾಘಪತ್, ಲಕ್ನೋ, ಲಖೀಮ್ ​ಪುರ್ ಖೇರಿ, ಬಿಜ್ನೋರ್, ಘಾಜಿಯಾಬಾದ್, ಮುಜಾಫರ್ ​ನಗರ್, ಬಾರಾಬಂಕಿ, ಮೊರಾದಾಬಾದ್ ಮೊದಲಾದೆಡೆ ಜನರು ರಸ್ತೆ ತಡೆ, ರೈಲು ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಭಾರತ ಬಂದ್‌ ಹಿನ್ನೆಲೆ ರೈತ ಸಂಘಟನೆಗಳು, ರೈತಪರ ಹೋರಾಟಗಾರರು, ವಿರೋಧ ಪಕ್ಷಗಳು ಬೀದಿಗಿಳಿದಿವೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳ ರೈತ ಸಂಘಗಳು  “ಭಾರತ್ ಬಂದ್” ನಲ್ಲಿ ಭಾಗವಹಿಸಿವೆ.

ಪ್ರಮುಖ ರೈತ ಸಂಘಟನೆಗಳಾದ ಅಖಿಲ ಭಾರತ ಕಿಸಾನ್​ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್​ಸಿಸಿ), ಅಖಿಲ ಭಾರತ ಕಿಸಾನ್​ ಮಹಾಸಂಘ್​​(ಎಐಕೆಎಂ) ಮತ್ತು ಭಾರತೀಯ ಕಿಸಾನ್​ ಯೂನಿಯನ್​(ಬಿಕೆಯು) ಕರೆ ನೀಡಿದ್ದ ಪ್ರತಿಭಟನೆಗೆ ಕಾಂಗ್ರೆಸ್, ಡಿಎಂಕೆ, ಎಎಪಿ, ಆರ್‌ಜೆಡಿ, ತೃಣಮೂಲ ಕಾಂಗ್ರೆಸ್ ಮತ್ತು ಕನಿಷ್ಠ 10 ಕೇಂದ್ರ ಕಾರ್ಮಿಕ ಸಂಘಗಳು ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಮಸೂದೆಗಳನ್ನು ರದ್ದುಗೊಳಿಸದ ಹೊರತು ತಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಸುಗ್ರೀವಾಜ್ಞೆಗಳನ್ನು ಆರಂಭದಿಂದಲೂ ತೀವ್ರವಾಗಿ ವಿರೋಧಿಸುತ್ತಿರುವ ಪಂಜಾಬ್‌ನ ರೈತ ಸಂಘಟನೆಗಳು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿವೆ. ರೈಲು ಹಳಿಗಳ ಮೇಲೆ ಕುಳಿತು ರೈಲ್​ ರೋಕೋ ಚಳವಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಉತ್ತರ ರೈಲ್ವೇ ವಿಭಾಗ ಈ ಭಾಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನ ರದ್ದುಗೊಳಿಸಿದೆ. ಪಂಜಾಂಬ್​ ಸಿಎಂ ಅಮರೀಂದರ್​ ಸಿಂಗ್​ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾಕಾರಲ್ಲಿ ಮನವಿ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಟ್ರ್ಯಾಕ್ಟರ್​ ಚಾಲನೆ ಮಾಡುವ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಹರಿಯಾಣದ ಬಿಜೆಪಿ ನಾಯಕರಾದ ಪಮಿಂದರ್ ಸಿಂಗ್ ಧುಲ್ ಮತ್ತು ರಾಂಪಾಲ್ ಮಜ್ರಾ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಕರೆದಿದ್ದಾರೆ. ಕೇಂದ್ರ ರೈತರ ವಾದವನ್ನು ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಕೃಷಿ ಮಸೂದೆಗಳ ವಿರುದ್ಧದ ಪ್ರತಿಭಟನೆಗೆ ಆರ್‌ಎಸ್‌ಎಸ್‌ ನೇತೃತ್ವದ ಎಲ್ಲಾ ರೈತ ಸಂಘಟನೆಗಳು ಬೆಂಬಲ ಸೂಚಿಸಿ, ಪ್ರತಿಭಟನೆಗೆ ಕೈಜೋಡಿಸಿವೆ. ಕರ್ನಾಟಕ ರಾಜ್ಯದಲ್ಲೂ ಹಲವು ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗುತ್ತಿದ್ದು, ರೈತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸುತ್ತಿವೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಒಪ್ಪುವುದಿಲ್ಲ, ಕಾರ್ಪೊರೇಟ್ ಕಂಪನಿಗಳ ಪರ ನಿಂತಿರುವ ಕೇಂದ್ರ ರಾಜ್ಯ ಸರ್ಕಾರಗಳಿಗೆ ಧಿಕ್ಕಾರ ಕೇಳಿಬಂದವು.

ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ, ರೈತರೇ ಈ ಮಸೂದೆಗಳನ್ನು ವಿರೋಧಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿರೋಧ ಪಕ್ಷಗಳು ಮಸೂದೆಗಳ ವಿರುದ್ಧ ಸುಳ್ಳು ವದಂತಿ ಹರಡುತ್ತಿವೆ ಎನ್ನುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ರೈತರಿಗೆ ಈ ಕಾಯ್ದೆಗಳ ಮಹತ್ವ ತಿಳಿಸಿ ಎಂದು ಸಲಹೆ ನೀಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *