- 2019ರ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾಪಿಸಿ ಕಾಂಗ್ರೆಸ್ಗೆ ಟಾಂಗ್
ದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿಗೆ ಯೂಟರ್ನ್ ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ಅದಕ್ಕೆ ಉದಾಹರಣೆ ಬೇಕಾದಷ್ಟು ಸಿಗುತ್ತವೆ. ಅಧಿಕಾರದಲ್ಲಿದ್ದಾಗ ನಿಯಮಗಳ ಜಾರಿಗೆ ಸಿದ್ಧತೆ ಮಾಡುವುದು ಬಳಿಕ ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷ ಅದೇ ನಿಯಮಗಳ ಜಾರಿಗೊಳಿಸುವಾಗ ವಿರೋಧಿಸುವುದು. ಜಿಎಸ್ಟಿ ಬಿಲ್ ಅನ್ನು ಯುಪಿಎ ಸರ್ಕಾರ ಮಂಡಿಸಲು ಹೋದಾಗ ನಖಾಶಿಖಾಂತ ವಿರೋಧಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ಜಾರಿಗೊಳಿಸಿತು. ಆಗ ಕಾಂಗ್ರೆಸ್ ವಿರೋಧಿಸಿತು. ಈಗ ಬಿಜೆಪಿ ಸರ್ಕಾರದ ಕೃಷಿ ತಿದ್ದುಪಡಿ ಮಸೂದೆಗಳನ್ನು ಬಿಜೆಪಿ ಜಾರಿಗೊಳಿಸುತ್ತಿದೆ. ಆದರೆ ಅದನ್ನು ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಪ್ರಸ್ತಾಪಿಸಿತ್ತು ಎಂದು ಬಿಜೆಪಿ ಹೇಳಿದೆ. ಈ ಮೂಲಕ ಕೃಷಿ ಕಾಯ್ದೆಗಳ ವಿರುದ್ಧ ನಿಂತಿರುವ ಕಾಂಗ್ರೆಸ್ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2019ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯ ಮೂಲಕವೇ ಮಂಗಳವಾರ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘2019ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯ 7ನೇ ವಿಭಾಗದ, ಪುಟ 9 ರಿಂದ: ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳ ಕಾಯ್ದೆಯನ್ನು ಕಾಂಗ್ರೆಸ್ ರದ್ದುಪಡಿಸುತ್ತದೆ ಮತ್ತು ಕೃಷಿ ಉತ್ಪನ್ನಗಳ ರಫ್ತು ಹಾಗೂ ಅಂತರರಾಜ್ಯ ವ್ಯಾಪಾರವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ,’ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ. ಹಾಗಿದ್ದರೆ, ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯಲ್ಲಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿತ್ತೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Did @INCIndia give a false promise during the Lok Sabha 2019 elections or are they provoking people now by asking states to bypass the central legislation? Wonder who advises their President?
— Nirmala Sitharaman (@nsitharaman) September 29, 2020
‘2019ರಲ್ಲಿ ಸುಳ್ಳು ಆಶ್ವಾಸನೆ ನೀಡಿದ್ದ ಕಾಂಗ್ರೆಸ್, ಕೇಂದ್ರದ ಕಾಯ್ದೆಗಳಿಗೆ ಪ್ರತಿಯಾಗಿ ಕಾನೂನು ರಚಿಸುವಂತೆ ಈಗ ಹೇಳಿ ಜನರನ್ನು ಪ್ರಚೋದಿಸುತ್ತಿದೆಯೇ? ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಯಾರು ಸಲಹೆ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಆಶ್ಚರ್ಯವಾಗುತ್ತಿದೆ,’ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೋಮವಾರ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ಜಾರಿ ಮಾಡಬೇಡಿ: ಕಾಂಗ್ರೆಸ್ ಸರ್ಕಾರಗಳಿಗೆ ಸೋನಿಯಾ ಸೂಚನೆ
‘ಕಾಂಗ್ರೆಸ್ ಆಡಳಿತವಿರುವ ಪಂಜಾಬ್, ಛತ್ತೀಸ್ಗಡ, ರಾಜಸ್ಥಾನ ಹಾಗೂ ಪುದುಚೇರಿ ಸರ್ಕಾರಗಳಿಗೆ ಈ ಬಗ್ಗೆ ಪತ್ರಗಳನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರವು ಜಾರಿ ಮಾಡಿರುವ ಕೃಷಿ ಕಾನೂನುಗಳು ರೈತವಿರೋಧಿಯಾಗಿದ್ದು, ಅವು ಜಾರಿಯಾಗದಂತೆ ಸಂವಿಧಾನದ 254(2)ನೇ ವಿಧಿಯಡಿ ಕಾನೂನುಗಳನ್ನು ರಚಿಸಬೇಕು. ಹೀಗೆ ಮಾಡಿದರೆ, ಮೂರು ಕೃಷಿ ಕಾನೂನುಗಳ ರೈತವಿರೋಧಿ ನೀತಿಗಳಿಂದ ರೈತರನ್ನು ರಕ್ಷಿಸಲು ಸಾಧ್ಯವಾಗಲಿದೆ ಎಂದು ಸೋನಿಯಾ ಸಲಹೆ ನೀಡಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.