– ಕೇಂದ್ರ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆ ಉಲ್ಲಂಘನೆ
ತಿರುವನಂತಪುರ: ರೈತ ಸಮುದಾಯದ ತೀವ್ರ ವಿರೋಧದ ನಡುವೆಯೂ ರೈತ ವಿರೋಧಿ ಕೃಷಿ ಸುಗ್ರೀವಾಜ್ಞೆಗಳ ಅಂಗೀಕಾರದ ವಿರುದ್ಧ ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೇಟ್ಟಿಲೇರಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಈ ಕ್ರಮವು ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿದೆ ಎಂದು ಕೇರಳ ಸರ್ಕಾರ ಆರೋಪಿಸಿದೆ.
ಕೇರಳ ರಾಜ್ಯ ಕೃಷಿ ಸಚಿವ ವಿ.ಎಸ್.ಸುನೀಲ್ ಕುಮಾರ್ ಈ ಕಾಯ್ದೆಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ಕಾನೂನು ಸಲಹೆ ಪಡೆದಿದ್ದರು. ನಂತರ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
“ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ ಕೃಷಿ ರಾಜ್ಯ ಪಟ್ಟಿಗೆ ಸೇರುತ್ತದೆ. ಆದರೆ ಈ ಮಸೂದೆಗಳನ್ನು ತರುವ ಮೊದಲು ಒಂದೇ ಒಂದು ರಾಜ್ಯವನ್ನು ಕೇಂದ್ರ ಸರ್ಕಾರ ಸಂಪರ್ಕಿಸಿಲ್ಲ. ಈ ಮಸೂದೆಗಳು ದೊಡ್ಡ ದೊಡ್ಡ ಕಾರ್ಪೋರೇಟ್‌ಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಕೃಷಿ ಸಚಿವ ವಿ.ಎಸ್.ಸುನೀಲ್ ಕುಮಾರ್ ಹೇಳಿದ್ದಾರೆ.
“ದೇಶಾದ್ಯಂತ ಲಕ್ಷಾಂತರ ರೈತರು ಶೋಚನೀಯ ಜೀವನ ನಡೆಸುತ್ತಿದ್ದಾರೆ ಮತ್ತು ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದಾರೆ ಇಂತಹ ಸ್ಥಿತಿಯಲ್ಲಿ ಮೋದಿ ಸರ್ಕಾರ ಸುಧಾರಣೆಗಳ ಹೆಸರಿನಲ್ಲಿ ಹೊಸ ನೀತಿಗಳನ್ನು ತಂದಿದೆ. ಆದರೆ ಈ ಹೊಸ ನೀತಿಗಳು ದೊಡ್ಡ ಕೃಷಿ ಸಂಸ್ಥೆಗಳ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತವೆ” ಎಂದು ಸಚಿವರು ಹೇಳಿದ್ದಾರೆ.
ಕೇರಳವು ಕೃಷಿ ರಾಜ್ಯವಲ್ಲದಿದ್ದರೂ, ಸೆಪ್ಟೆಂಬರ್ 25 ರಂದು ರೈತ ಸಂಘಟನೆಗಳು ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿದೆ. ಜೊತೆಗೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸಿ ಗದ್ದಲ ನಡೆಸಿದ್ದಕ್ಕಾಗಿ ರಾಜ್ಯಸಭಾ ಸಂಸದರಾದ ಕೆ.ಕೆ. ರಾಗೇಶ್ ಮತ್ತು ಎಲಮಾರೋಮ್ ಕರೀಮ್ ಅಮಾನತುಗೊಂಡಿದ್ದಾರೆ. ಸದ್ಯ ಕೇರಳ ಸರ್ಕಾರ ಮಸೂದೆಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ.