ಮಂಡ್ಯ : ಕೃಷಿ ಕೂಲಿಕಾರರು ಅಪೌಷ್ಠಿಕತೆಯಿಂದ ಬಳಲುವಿಕೆ ತೊಲಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ರೂಪಿಸಬೇಕು ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜು ಆಗ್ರಹಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಮತ್ತು ಮಹಿಳಾ ಕೃಷಿಕೂಲಿಕಾರರ ಉಪ ಸಮಿತಿ ಜಿಲ್ಲಾ ಶಾಖೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಮಹಿಳಾ ಕೃಷಿ ಕೂಲಿಕಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಕೃಷಿಪ್ರಧಾನ ರಾಷ್ಟ್ರವಾಗಿದ್ದರೂ ಬಹುಪಾಲು ಕೂಲಿಕಾರ್ಮಿಕರು ಅಪೌಷ್ಠಿಕಾಹಾರದಿಂದ ಬಳಲಿ ಸಾವನ್ನಪ್ಪುತ್ತಿದ್ದರೂ ಸರ್ಕಾರಗಳು, ಮಾಧ್ಯಮಗಳು ಬೇಜವ್ದಾರಿ ತೋರುತ್ತಿವೆ, ಬಂಡವಾಳಶಾಹಿಗಳ ಪರ ಕಾರ್ಯ ಸಲ್ಲಿಸುತ್ತಿವೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯನ್ನು ಭೋಗವಸ್ತು, 2ನೇ ದರ್ಜೆಯ ಪ್ರಜೆ ಎಂದು ಪರಿಗಣಿಸಿದ್ದ ನೀತಿಯ ಸರ್ಕಾರ ಇಡೀ ರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದು ಮಹಿಳೆಯರ ಮೇಲಿನ ಹಲ್ಲೆ, ಆಕ್ರಮಣ, ಬಲತ್ಕಾರ, ಅತ್ಯಾಚಾರ, ಕೊಲೆಗಳು ಹೆಚ್ಚಳವಾಗುತ್ತಿವೆ. ಇವುಗಳನ್ನು ತಡೆಗಟ್ಟುವಲ್ಲಿ ಸರ್ಕಾರಗಳು ಮತ್ತು ಬಂಡವಾಳಶಾಹಿಗಳು ವಿಫಲವಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ಇತ್ತೀಚಿನ ದಿನದಗಳಲ್ಲಿ ವಿವಾಹವಾದ ಕೆಲವೇ ದಿನಗಳು, ತಿಂಗಳು, ವರ್ಷಗಳಲ್ಲಿ ಕೌಟುಂಬಿಕ ಬಿಕ್ಕಟ್ಟು ಉಲ್ಭಣಗೊಂಡು ವಿಚ್ಛೇಧನ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಸಾಂಸಾರಿಕ ಬಿಕ್ಕಟ್ಟುಗಳು ತೀವ್ರವಾಗುತ್ತಿವೆ ಇದರ ಬಗ್ಗೆ ಆಳ ವಿಮರ್ಶೆ ಮತ್ತು ಅಧ್ಯಯನ ಅವಶ್ಯವಾಗಿದೆ. ಬಾಲಕೀಯರು ಮತ್ತು ಹೆಣ್ಣು ಮಕ್ಕಳಿನ ಮೇಲೆ ಕ್ರೌರ್ಯಗಳು ಹೆಚ್ಚುತ್ತಿದ್ದು ಸುಧಾರಣೆಗೆ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.
ಪುರುಷರಿಗಿಂತ ಕೆಲಸ ನಿರ್ವಹಿಸವಲ್ಲಿ, ಮನೆ ನಿರ್ವಹಣೆಯಲ್ಲಿ, ಮಹಿಳೆಯದು ಪ್ರಮುಖ ಪಾತ್ರವಿದೆ, ಆರ್ಥಿಕ ಕ್ಷೇತ್ರ ಸಬಲೀಕರಣಗೊಳ್ಳಲು ಇವರ ದುಡಿಮೆ ಮುಖ್ಯವಾಗಿದೆ, ಕೂಲಿಕಾರರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸುತ್ತಿರುವುದು ದುರಂತ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಎಂ. ಪುಟ್ಟಮಾದು ಅವರು, ಸಮಾನ ಕೆಲಸಕ್ಕೆ ಸಮನ ಕೂಲಿ ನೀಡುವುದು, ಮಹಿಳಾ ಕೂಲಿಕಾರರಿಗೆ ಪುರಷರಿಗೆ ಕೊಡುವಷ್ಟೇ ಕೂಲಿಯನ್ನು ನೀಡಬೇಕು. ಮಹಿಳೆಯರಿಗೆ ಪುರಷರಷ್ಟೇ ಕೂಲಿ ನೀಡಲು ನಿರಾಕರಿಸುವವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿಯುವವರಿಗೆ ವಾರಕ್ಕೊಮ್ಮೆ ಕೂಲಿ ಹಣ ಪಾವತಿ ಮಾಡಬೇಕು. ವರ್ಷದಲ್ಲಿ ಒಂದು ಕುಟುಂಬದ ಒಬ್ಬ ಸದಸ್ಯನಿಗೆ ವರ್ಷದಲ್ಲಿ 100 ದಿನಗಳ ಕೆಲಸ ಕೊಡುವುದನ್ನು ಬದಲಾಯಿಸಿ ಕೆಲಸ ಬಯಸುವ ಎಲ್ಲರಿಗೂ ವರ್ಷಕ್ಕೆ ಕನಿಷ್ಠ 200 ದಿನಗಳ ಕೆಲಸ ಕೊಡಬೇಕು. ದಿನಗೂಲಿಯನ್ನು ರೂ. 600ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಮಹಿಳಾ ಕೃಷಿ ಕೂಲಿಕಾರರ ಸಮೀಕ್ಷೆ ನಡೆಸಿ ಅವರೆಲ್ಲರಿಗೆ ಗುರುತಿನ ಚೀಟಿಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಕೃಷಿಕೂಲಿಕಾರರ ಉಪ ಸಮಿತಿ ಜಿಲ್ಲಾ ಶಾಖೆ ಸಹ ಸಂಚಾಲಕಿಯರಾದ ಶುಭಾವತಿ, ಅನಿತಾ, ಶಾಂತಮ್ಮ, ಜಯಮ್ಮ, ಪೂರ್ಣಿಮಾ, ಸವಿತಾ, ರಾಜೇಶ್ವರಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಹನುಮೇಶ್, ರಾಜ್ಯ ಸಹಕಾರ್ಯದರ್ಶಿ ಹನುಮೇಗೌಡ, ಜಿಲ್ಲಾ ಉಪಾಧ್ಯಕ್ಷರಾದ ಶಿವಮಲ್ಲಯ್ಯ, ಬಸವರಾಜು, ಬಸವಣ್ನ, ಸುರೇಂದ್ರ, ರಾಜು, ಸಿಐಟಿಯು ಕಾರ್ಯದರ್ಶಿ ಸಿ.ಕುಮಾರಿ ಮತ್ತಿತರರಿದ್ದರು.