ನವದೆಹಲಿ ಜ 28 : ಗಣತಂತ್ರ ದಿನದಂದು ರೈತ ಸಂಘಗಳು ಸಂಘಟಿಸಿದ ಬೃಹತ್ ಟ್ರಾಕ್ಟರ್ ಪರೇಡಿನಲ್ಲಿ ಒಂದು ಲಕ್ಷ ಟ್ರಾಕ್ಟರುಗಳು , ಲಕ್ಷಾಂತರ ರೈತರು ಭಾಗವಹಿಸಿ ಒಪ್ಪಿಕೊಂಡಿದ್ದ ಮಾರ್ಗಗಳಲ್ಲಿ ಶಾಂತಿಯುತವಾಗಿ ಸಾಗಿದರು, ಇದು ಪ್ರಶಂಸನೀಯ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ವರ್ಣಿಸಿದೆ.
ದೇಶದ ಎಲ್ಲ ರಾಜ್ಯಗಳಲ್ಲಿಯೂ ಇಂತಹುದೇ ಪರೇಡ್‍ಗಳು ಮತ್ತು ಇತರ ಸೌಹಾರ್ದ ಕಾರ್ಯಾಚರಣೆಗಳು ದೊಡ್ಡ ಪ್ರಮಾಣದಲ್ಲಿ ನಡೆದವು. ಈ ಹೋರಾಟ ಈ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ದೇಶದ ಎಲ್ಲ ರೈತರಿಗೆ ಒಂದು ಕಾನೂನಾತ್ಮಕ ಹಕ್ಕಾಗಿ ಶಾಸನ ಮಾಡಬೇಕು ಎಂದು ಒತ್ತುಕೊಟ್ಟು ಪುನರುಚ್ಚರಿಸಿದೆ. ಈ ಪ್ರತಿಗಾಮಿ ಕಾಯ್ದೆಗಳನ್ನು ರದ್ದು ಮಾಡುವ ವರೆಗೆ ಶಾಂತಿಯುತ ಹೋರಾಟವನ್ನು ಮುಂದುವರೆಸಲು ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರದೊಂದಿಗೆ ಪೊಲಿಟ್ ಬ್ಯುರೊ ಸಂಪೂರ್ಣ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಗಳು ಪ್ರಧಾನ ಬೇಡಿಕೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲ. ಈ ಘಟನೆಗಳು ಗಲಭೆ ಪ್ರಚೋದಿಸುವ ಏಜೆಂಟರ ಕೃತ್ಯಗಳು, ಇವರಲ್ಲಿ ಕೆಲವರು ಆಳುವ ಪಕ್ಷದೊಂದಿಗೆ ಸಂಪರ್ಕ ಹೊಂದಿರುವವರು, ಇವನ್ನು ಸಮಸ್ತ ರೈತ ಆಂದೋಲನ ಖಂಡಿಸಿದೆ. ಅದೇ ವೇಳೆಗೆ, ಟ್ರಾಕ್ಟರ್ ಪರೇಡಿಗೆ ಒಪ್ಪಿಕೊಂಡ ಮಾರ್ಗಗಳಲ್ಲೂ ಪೋಲೀಸರು ಅಡೆ-ತಡೆಗಳನ್ನು ಒಡ್ಡಿದ್ದು, ಹಲವೆಡೆಗಳಲ್ಲಿ ಲಾಠೀ ಪ್ರಹಾರ, ಅಶ್ರುವಾಯು ಪ್ರಯೋಗಗಳನ್ನು ನಡೆಸಿರುವುದು ಸಹಜವಾಗಿಯೂ ಆಕ್ರೋಶವನ್ನು ಪ್ರಚೋದಿಸಿದೆ. ಇಂತಹ ಕ್ರಿಯೆಗಳನ್ನು ಮನ್ನಿಸುವುದು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ತಕ್ಷಣವೇ ಈ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಪ್ರಕಟಿಸಬೇಕು, ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಉದ್ದೇಶದತ್ತ ಸಾಗಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ಕರೆ ನೀಡಿದೆ.