ಪ್ರತಿಭಟನೆ ತೀವ್ರಗೊಳಿಸಿದ ರೈತರು, ಇಂದಿನಿಂದ ದೇಶವ್ಯಾಪಿ ನಿರಂತರ ಪ್ರತಿಭಟನೆ
ದೆಹಲಿ : ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುನರುಚ್ಚರಿಸಿದ್ದಾರೆ. ಗುಜರಾತ್‌ನ ಧೋರ್ಡೊದಲ್ಲಿ ಸಿಖ್ ಸಮುದಾಯದ ರೈತರ ಜೊತೆ ಸಂವಾದ ನಡೆಸುತ್ತಾ, ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ರೈತರ ದಾರಿತಪ್ಪಿಸಿವೆ. ಇವು ರೈತರಿಗೆ ಅತ್ಯಂತ ಪ್ರಯೋಜನಕಾರಿ ಕಾಯ್ದೆಗಳು. ಹಾಗಾಗಿಯೇ, ವಿರೋಧ ಪಕ್ಷಗಳು ಮತ್ತು ರೈತರ ಸಂಘಟನೆಗಳು ಇಂತಹ ಕಾಯ್ದೆಗಳು ಜಾರಿಯಾಗಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು ಎಂದು ಅವರು ಹೇಳಿದ್ದಾರೆ.
‘ಈಗಿನ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಇವೇ ಕಾನೂನುಗಳನ್ನು ಜಾರಿಗೆ ತರಲು ಬಯಸಿದ್ದವು. ಆದರೆ, ನಿರ್ಧಾರ ಕೈಗೊಳ್ಳಲು ಅವರಿಗೆ ಆಗಿರಲಿಲ್ಲ. ಈಗ, ಜಮೀನುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ರೈತರ ದಾರಿ ತಪ್ಪಿಸುತ್ತಿವೆ’ ಎಂದು ಪ್ರಧಾನಿ ಆಪಾದಿಸಿದರು. ರೈತರಿಗಾಗಿ 24 ಗಂಟೆ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಪ್ರತಿಭಟನೆ ತೀವ್ರಗೊಳಿಸಿದ ರೈತರು : ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 22 ನೇ ದಿನಕ್ಕೆ ಕಾಲಿಟ್ಟಿದ್ದೆ. ಇಲ್ಲಿಯವರೆಗೆ ಸರಕಾರದ ಜೊತೆ ಮಾತುಕತೆ ವಿಫಲಗೊಂಡ ಹಿನ್ನಲೆಯಲ್ಲಿ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ಮೋದಿಯವರ ಪರಮಾಪ್ತರಾದ ಆದಾನಿ, ಅಂಬಾನಿ ಕಂಪನಿಗಳ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದ ರೈತರು ಇಂದಿನಿಂದ ಡೆಸೆಂಬರ್ 31 ರ ವರೆಗೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ ರೈತರ ಜೊತೆ ಇದ್ದೇವೆ ಎಂಬುದು ಮೋದಿಯ ನಾಟಕ, ಅವರು ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಅನುಕೂಲಕ್ಕಾಗಿ ಕಾಯ್ದೆ ತಂದಿದ್ದಾರೆ ಹೊರತು ರೈತರ ಹಿತಕ್ಕಾಗಿ ಅಲ್ಲ. ದಿಕ್ಕುತಪ್ಪಿಸುವ ಬದಲು ಮಸೂದೆಗಳನ್ನು ವಾಪಸ್ಸು ಪಡೆಯಲು ನಿರ್ಧಾರವನ್ನು ಮಾಡಲಿ ಎಂದು AIKSCC ತಿರುಗೇಟು ನೀಡಿದೆ.