ಬಾಗೇಪಲ್ಲಿ : ನನಗೆ ರೈತರು-ಕಾರ್ಮಿಕರು ಅಂದರೆ ತುಂಬಾನೇ ಅಭಿಮಾನ. ಅವರ ಸಮಸ್ಯೆಗಳಿಗೆ ಯಾವಾಗಲೂ ಸ್ಪಂದಿಸುತ್ತೇನೆ. ಈ ಭಾರತದಲ್ಲಿ ಕೃಷಿ ಕಾರ್ಮಿಕರಿಗೆ ಸಮಾನ ನ್ಯಾಯವೆಂಬುದು ಇಲ್ಲವಾಗಿದೆ. ನಿಮಗೆ ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ ಸಿಗಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮ್ಮೇಳನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮೂರು ದಿನಗಳು(ನವೆಂಬರ್ 29-30, ಡಿಸೆಂಬರ್ 1, 2022) ಹಮ್ಮಿಕೊಳ್ಳಲಾಗಿದ್ದು, ಇಂದು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿತ್ತು.
ಬಹಿರಂಗ ಸಭೆಯನ್ನು ಉದ್ದೇಶಿಸಿ ವಿ.ಗೋಪಾಲಗೌಡ ಅವರು ಮಾತನಾಡಿ, ಭಾರತ ಸರ್ಕಾರ ಜಾರಿಗೊಳಿಸಿರುವ ನರೇಗಾ ಯೋಜನೆ, ಹಿಂದುಳಿದ ವರ್ಗದ ಜನರಿಗೆ ಉತ್ತಮ ವೇತನ ನೀಡಬೇಕು. ಇಂತಹ ಮಹತ್ವದ ಯೋಜನೆಯಡಿ ನಮ್ಮ ಆಳುವ ವ್ಯವಸ್ಥೆ ನಿಮಗೆ ಉದ್ಯೋಗವನ್ನು ನೀಡಲು, ನಿಮ್ಮನ್ನು ಸದೃಢರನ್ನಾಗಿ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಿಮಗೆ ಉದ್ಯೋಗ ಸೃಷ್ಟಿ ಮಾಡಿಕೊಟ್ಟಿಲ್ಲ ಎಂದರು.
ಕೃಷಿ ಕಾರ್ಮಿಕರು ಯಾರೆಂದರೆ ಯಾರೂ ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡುವ ಜನರಲ್ಲ. ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರೇ. ಕೃಷಿ ಕಾರ್ಮಿಕರ ಮಕ್ಕಳೆಲ್ಲರೂ ಶಾಲೆಗೆ ಹೋಗುವುದಿಲ್ಲ. ಆ ವ್ಯವಸ್ಥೆಯೂ ಇಲ್ಲ. ಅದು ಎಲ್ಲೋ ಒಂದು ಕಡೆ ಮಾತ್ರ ಇರುತ್ತದೆ. ನರೇಗಾದಲ್ಲಿ ಕೇವಲ 150 ದಿನ ಕೆಲಸ ಕೊಟ್ಟರೆ ಸಾಲದು. ವರ್ಷದ 365 ದಿನವೂ ಕೃಷಿ ಕಾರ್ಮಿಕರಿಗೆ ಕೆಲಸ ಕೊಡಬೇಕು. ಆ ಕೆಲಸವನ್ನು ಭಾರತ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿ ಕೂಲಿಕಾರರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಭಾರತದಲ್ಲಿ ಕೊರೊನಾ ದಾಳಿ ಮಾಡಿದಾಗ ನಿಮಗೆ ಉತ್ತಮ ಸೇವೆ ಸಿಗಲಿಲ್ಲ. ನಿಮ್ಮಿಂದಲೇ ಸರಕಾರದ ಅಧಿಕಾರ ಹಿಡಿದಿರುವ ಶಾಸಕರು, ಸಂಸದರು, ಸಚಿವರುಗಳು ಅವರೆಲ್ಲ ಚೆನ್ನಾಗಿದ್ದಾರೆ. ಆದರೆ, ಕೃಷಿ ಕಾರ್ಮಿಕರ ಪರಿಸ್ಥಿತಿ ಮಾತ್ ಅತಂತ್ರವಾಗಿದೆ ಎಂದು ತಿಳಿಸಿದರು.
ನಾನು ಸುಪ್ರೀಂ ಕೋರ್ಟ್ ನಿಂದ ನಿವೃತ್ತಿಯಾಗಿದ್ದೇನೆ. ಅಲ್ಲಿ ನನಗೆ ಒಂದು ಹೆಸರು ಇಟ್ಟಿದ್ದರು ಅದೇನಂದರೆ ಪ್ರಜಾ ನ್ಯಾಯ ಮೂರ್ತಿ ಅಂತ. ನಾನು ಕರ್ನಾಟಕದ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ಮುಂದೆ ಈ ಪ್ರಕರಣ ಬಂದಿತು. ಆಗ ಸರ್ಕಾರಕ್ಕೆ ತಿಳಿ ಹೇಳಿ ಜನಕ್ಕೆ ಉದ್ಯೋಗ ಕೊಡಿ ಎಂದು ಪ್ರಸ್ತಾಪಿಸಿದೆ ಎಂದು ತಿಳಿಸಿದರು.
ಇದೇನಾ ಪ್ರಜಾಪ್ರಭುತ್ವ, ಇದೆಂತ ಪ್ರಜಾಪ್ರಭುತ್ವ. ಸರಕಾರ ಎಷ್ಟೊಂದು ಯಾತ್ರೆ ಮಾಡುತ್ತಾರೆ. ಅದಕ್ಕೆ ಖರ್ಚು ಮಾಡುತ್ತಾರೆ ಆದರೆ ನಿಮಗೆ ನೀಡುವುದಿಲ್ಲ. ಭಾರತ ಸರಕಾರದ ಶಾಸನ ಸಭೆಯಲ್ಲಿ ಎಷ್ಟು ಜನ ಸಂಸದರು ಇದ್ದಾರೆ ಯಾರ‍್ಯಾರು ಬಂದು ನಿಮ್ಮ ಕಷ್ಟ ಕೇಳಿದ್ದಾರೆ. ಇನ್ನು ಕೇವಲ 4 ತಿಂಗಳು ಉಳಿದಿದೆ. ನಿಮಗಾಗಿ ಯಾರೂ ಶಾಸನ ಸಭೆಯಲ್ಲಿ ಹೊರಡುತ್ತಾರೋ ಅವರನ್ನು ನೀವು ಗೆಲ್ಲಿಸಬೇಕು. ನಿಮಗೆ ಸಂವಿಧಾನದಲ್ಲಿ ಕಾನೂನು ಇದೆ. ಅದನ್ನು ಬಳಸಿಕೊಳ್ಳಿ ನಿಮಗೆ ನಿಮ್ಮ ಮಕ್ಕಳಿಗೆ ಉದ್ಯೋಗ ಶಿಕ್ಷಣ ನೀಡಿ ಎಂದು ವಿ.ಗೋಪಾಲಗೌಡ ತಿಳಿಸಿದರು.
ನಾವು ತಿನ್ನುವ ಎಲ್ಲ ಆಹಾರ ತರಕಾರಿ ಎಲ್ಲ ವಿಷಪೂರಿತ. ನಿಮ್ಮ ತ್ಯಾಗದಿಂದ ನಗರದ ಜನಗಳು ಬದುಕುತ್ತಿದ್ದಾರೆ. ಆದರೆ ನಿಮಗೆ ಏನೂ ಇಲ್ಲ, ನೀವು ಮೊದಲು ಶಕ್ತಿಯುತರಾಗಿರಬೇಕು. ಇಂದಿಗೂ ಬಹಳಷ್ಟು ಕೃಷಿ ಕಾರ್ಮಿಕರ ಕುಟುಂಬಗಳಿಗೆ ಶೌಚಾಲಯ ಇಲ್ಲ, ಮನೆ ಇಲ್ಲ, ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ನಿಮಗೆ ಇನ್ನೂ ಒದಗಿಬಂದಿಲ್ಲ. ಉದ್ಯೋಗ ಇಲ್ಲ, ಶಿಕ್ಷಣ ಇಲ್ಲ. ಇವುಗಳೆಲ್ಲವನ್ನೂ ಸರಕಾರ ನಿಮಗೆ ಕೊಡಬೇಕು ಎಂದರು.
ಇಲ್ಲಿ ಆಯೋಜಿಸಲಾಗಿರುವ ಇಂಥಹ ಸಭೆಗಳು ನಿಮಗೆ ಇರುವ ಸೌಲಭ್ಯ ಮತ್ತು ನಿಮ್ಮ ಹಕ್ಕುಗಳ ಬಗ್ಗೆ ವಿಚಾರಗಳನ್ನು ತಿಳಿಸುತ್ತಿರುವೆ. ಈ ಮೂರು ದಿನಗಳ ಕಾಲ ನಡೆಯುವ ರಾಜ್ಯ ಸಮ್ಮೇಳನದಲ್ಲಿ ಕೂಲಿಕಾರರ ಬಗ್ಗೆ ಚರ್ಚೆಯಾಗಲಿ, ಸಂಘಟನೆ ಬಲಗೊಳಿಸುವ ಕೆಲಸಗಳು ನಡೆಯಲಿ ಎಂದು ಕರೆ ನೀಡಿದರು.