- ನಾಳೆ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮೂರನೇ ಸುತ್ತಿನ ಸಭೆ
ಹೊಸದಿಲ್ಲಿ: ನೂತನ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ನಾಳೆ(ಡಿ.03-ಗುರುವಾರ), ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮೂರನೇ ಸುತ್ತಿನ ಸಭೆ ನಡೆಯಲಿದೆ.
ಈ ಮಧ್ಯೆ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು, ರೈತ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಈ ಕುರಿತು ಮಾತನಾಡಿರುವ ಕ್ರಾಂತಿಕಾರಿ ಕಿಸಾನ್ ಸಂಘದ ಮುಖ್ಯಸ್ಥ ದರ್ಶನ್ ಪಾಲ್, ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಕೂಡಲೇ ಸಂಸತ್ತಿನ ವಿದೇಶ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿ ಕಾನೂನುಗಳ ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಈ ಕೂಡಲೇ ಈ ಕಾನೂನುಗಳನ್ನು ಕೇಂದ್ರ ಸರ್ಕಾರ ಮರಳಿ ಪಡೆಯಬೇಕು. ಸಂತ್ತಿನ ಅನುಮೋದನೆ ಪಡೆಯಲು ವಿಶೇಷ ಅಧಿವೇಶನ ಕರೆಯಬೇಕು ಎಂದು ದರ್ಶನ್ ಪಾಲ್ ಆಗ್ರಹಿಸಿದರು.
ಇನ್ನು ಕೃಷಿ ಕಾನೂನುಗಳ ಜಾರಿ ವಿರೋಧಿಸಿ ತಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿರುವ ರೈತ ಸಂಘಟನೆಗಳು, ಈ ಕಾನೂನು ರದ್ದಾಗುವುವರೆಗೂ ದೇಶಾದ್ಯಂತ ಮೋದಿ ಸರ್ಕಾರ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಪ್ರತಿಕೃತಿಗಳನ್ನು ದಹನ ಮಾಡಲಾಗುವುದು ಎಂದು ಎಚ್ಚರಿಸಿವೆ.
ಇನ್ನು ನಾಳಿನ(ಗುರುವಾರ) ಸಭೆಯ ಕುರಿತು ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮೂರನೇ ಸುತ್ತಿನ ಸಭೆ ಫಲಪ್ರದವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ನಾಳಿನ(ಗುರುವಾರ) ಸಭೆಗೂ ಮುನ್ನವೇ ರೈತ ಸಂಘಟನೆಗಳು ವಿಶೇಷ ಸಂಸತ್ ಅಧಿವೇಶನಕ್ಕೆ ಆಗ್ರಹಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.